ಬುಧವಾರ, ಏಪ್ರಿಲ್ 13, 2022

ಮೂಕರಾಗ


09/04/2022 - ಕುಂದಾನಗರಿ

ನನ್ನ ಹೃದಯವೆಂಬ ಹೂಬನದೊಳಗೆ
ಮತ್ತದೇ ನೆನಪುಗಳ ನರ್ತನ ಮನದೊಳಗೆ
ಚಿವುಟಿ ಹಾಕಿದರೂ ಮತ್ತೆ ಹುಟ್ಟುವ ಕಳೆಯಂತೆ
ಮೊಳೆಯುತಿದೆ ಭಾವಗಳು ಒಳಗೊಳಗೆ...

ನೆನಪಿನ ಸುಳಿಯೊಳಗೆ ಕೊಚ್ಚಿ ಹೋಗುತಿರುವೆ
ನನ್ನೊಳಗೆ ನಾನೇ ಕಳೆದು ಹೋಗಿರುವೆ
ತೀರ ಸಿಗದ ನೌಕೆಯ ಪಯಣಿಗನು ನಾನು
ಭಾವದ ಶರಧಿಯೊಳಗೆ ಮುಳುಗುತಿರುವೆ...

ಒಲವಿನ ಸವಿಯೂಟಕೆ ಕಾದಿದೆ ಮನವು
ನಿನ್ನಾಗಮನದ ಚಡಪಡಿಕೆ ನಿರಂತರವು
ಮರೀಚಿಕೆಯು ಒಲವ ಅಮೃತ ಧಾರೆಯು
ನಿನ್ನ ಪಿಸುಮಾತಿಗಾಗಿ ಮನದ ಹುಡುಕಾಟವು

ಬೆಂಬಿಡದೆ ಕಾಡುತಿದೆ ತುದಿ ಬೆರಳ ಸ್ಪರ್ಶ
ಮನಕೆ ಇನ್ನಿಲ್ಲದೇ ತಂದಿದೆ ಆ ಕ್ಷಣವು ಹರ್ಷ
ನೆನಪಿನಲಿಯಲಿ ತೇಲುತಿಹ ಮನದಲಿ
ಹೊರಬರದೇ ಮೂಕರಾಗದ ಸಂಘರ್ಷ 

ಗುರುವಾರ, ಸೆಪ್ಟೆಂಬರ್ 2, 2021

ಮಳೆ ಮತ್ತು ನೆನಪುಗಳು


06/08/2021 - ಕ್ರಾಂತಿಧ್ವನಿ

ಆಹಾ ಎಂಥ ಸೊಗಸು ಮಳೆಯ ಮಲೆನಾಡು
ಜೀವನದಿ ಒಮ್ಮೆಯಾದರೂ ಇದನು ನೋಡು
ಇಲ್ಲಿದೆ ಸಾವಿರ ಸವಿಸವಿ ನೆನಪುಗಳ ಜಾಡು
ಮಲೆನಾಡು ನನ್ನಯ ಒಲುಮೆಯ ಗೂಡು

ಕೆಸುವಿನ ಎಲೆಯ ಮೇಲೆ ಮುತ್ತಿನ ನೀರ ಹನಿ
ನಡು ರಾತ್ರಿಯಲೂ ಕಪ್ಪೆಗಳ ಕರಕರ ದನಿ
ಮಳೆಯಲಿ ಹಸಿರು ಹಾಸು ಹಾಸಿದ ಅವನಿ
ಆಹಾ!! ಇದು ನನ್ನ ಮಳೆಯ ಮಲೆನಾಡು

ಮರದ ಮೇಲಿನ ಸೀತಾಳೆ ಹೂವ ಸೊಬಗು
ಸುತ್ತಲೂ ನೆಟ್ಟ ಗದ್ದೆಯ ಹಸಿರಿನ ಮೆರಗು
ಧೋ ಎಂದು ಕೂಗುವ ಜಲಪಾತದ ಬೆರಗು
ಆಹಾ!! ಇದು ನನ್ನ ಮಳೆಯ ಮಲೆನಾಡು

ಕಾಲಿಟ್ಟರೆ ಮಿಜಿಗುಡುವ ಉಂಬಳದ ಕಾಟ
ಸಾಲಾಗಿ ತೊಟ್ಟಿಕ್ಕುವ ಮುತ್ತಿನ ಹನಿ ನೋಟ
ಹಳ್ಳಿಯ ಮಕ್ಕಳ ಮೋಜಿನ ನೀರಾಟ
ಆಹಾ!! ಇದು ನನ್ನ ಮಳೆಯ ಮಲೆನಾಡು

ನೆನಪುಗಳ ನರ್ತನ

ನೆನಪುಗಳ ನರ್ತನ

ಜಿಟಿ ಜಿಟಿ ತಂಪಾಗಿ
ಮಳೆಯು ಸುರಿಯುತಿದೆ
ಮನದಿ ತಿರುಗಿ ತಿರುಗಿ
ನಿನ್ನ ನೆನಪು ಕಾಡುತಿದೆ
ಮನ ಮರುಗಿ ಮರುಗಿ
ವಿರಹ ಮೂಡುತಿದೆ

ಬನದಿ ನಗುವ ಗುಲಾಬಿಯ
ಬಿಸಿಲ ಧಗೆಗೆ ಮುದುರಿದೆ
ಬಾನೆತ್ತರಕೆ ಹಾರುವ ಹಕ್ಕಿ
ಗೂಡಲಿ ಮುದುಡಿ ಕುಳಿತಿದೆ
ನಗುವ ಮನವು ಈಗ
ಮಾತಿಲ್ಲದೇ ಮೂಕವಾಗಿದೆ

ಮಾಸದ ನೆನಪುಗಳು
ಮನದಿ ನರ್ತನ ಮಾಡಿದೆ
ಸಮಾಧಿಯೊಳಗಿನ ಭಾವ
ಮತ್ತೆ ಜೀವವ ಪಡೆದಿದೆ
ಭಾವದ ಅಲೆಯೊಳಗೆ
ಜೀವ ಸಿಲುಕಿ ನಲುಗಿದೆ

ಬುಧವಾರ, ಆಗಸ್ಟ್ 4, 2021

ವಿಜಯಾನಂದದ ಸವಾರಿ

06/08/2021 - ಕ್ರಾಂತಿಧ್ವನಿ

ಸವಾರಿ ಹೊರಟೆ ವಿಜಯಾನಂದ ಬಸ್ಸಿನಲ್ಲಿ
ಬಹು ಆನಂದವಾಯಿತು ನನಗೆ ಮನದಲ್ಲಿ
ಕುಳಿತೆ ಮುದದಿಂದ ಕಿಟಕಿ ಪಕ್ಕದ ಸೀಟಿನಲ್ಲಿ
ಮೊದಲ ಪಯಣವು ನನದು ಈ ಬಸ್ಸಿನಲ್ಲಿ

ಮೆಲುವಾದ ಸಂಗೀತ ಕೇಳುತ ಸಾಗಿತು ಪಯಣ
ನೋಡುತ ಮೈಯನು ಮರೆತೆ ಹಸಿರಿನ ತಾಣ
ಆಗಲೇ ಬಂದಿತು ಊಟ ಮಾಡುವ ನಿಲ್ದಾಣ
ಇಳಿದೆ ತೆಗೆದುಕೊಂಡು ಊಟಕೆ ಬೇಕಾದ ಹಣ

ಊಟವನು ಮುಗಿಸಿ ಬಂದೆ ಏರಲು ಬಸ್ಸನು
ಕಾಣದೇ ಬೋರ್ಡ್ ನು ಆದೆ ನಾನು ಮಂಗನು
ನೋಡಿ ದಂಗಾದೆ ಒಂದೇ ರೀತಿಯ ಬಸ್ಸನು
ಏನೂ ಮಾಡಲು ತೋಚದೇ ಹುಡುಕಿದೆ ಬಸ್ಸನು

ಯಾವ ಬಸ್ಸಿಗೂ ಬರೆದಿಲ್ಲವು ಊರ ಹೆಸರು
ನನಗೆ ನಿಂತ ಹಾಗಾಯಿತು ಒಮ್ಮೆಲೇ ಉಸಿರು
ಪರದಾಟವನು ನೋಡಿ ಕೇಳಿದರು ಒಬ್ಬರು
ಪರಿಸ್ಥಿತಿ ಅರಿತು ಸಹಾಯಕೆ ಬಂದರು ಅವರು

ನೋಡಿ ನಿಮ್ಮ ಬಸ್ಸಿನ ನಂಬರು ಇಲ್ಲ ಇಲ್ಲಿ ಹೆಸರು
ಆಗ ನೋಡಿದೆ ಟಿಕೇಟಿನಲ್ಲಿ ನನ್ನ ಬಸ್ಸಿನ ನಂಬರು
ಅಷ್ಟರಲ್ಲಿ ಬಸ್ಸಿನ ನಿರ್ವಾಹಕರು ಸಹ ಬಂದರು
ಇದು ನನ್ನ ಮೊದಲ ಪಯಣ ಕೇಳಿ ನೀವೆಲ್ಲರೂ

ವೇದಾವತಿ ಭಟ್ಟ
ಮುಂಬೈ 

ಬುಧವಾರ, ಜುಲೈ 14, 2021

ಜೀವ ಜೀವನ


ಜೀವವು ಇದ್ದರೆ ಜೀವನ ಎನ್ನುವಂತಾಗಿದೆ ಸ್ಥಿತಿ ಇಂದು
ಜೀವಿಯ ಜೀವದ ಜೊತೆ ಆಟವಾಡಿದ ಮನುಜ ಅಂದು
ಸ್ವಾರ್ಥದ ಜೀವನವು ಬೇಡ ಹೇ ಮನುಜ ಎಂದೆಂದೂ
ಯೋಚಿಸಿ ಕೆಲಸವನು ಮಾಡುವ ಹಿಂದು-ಮುಂದು

ಎಲ್ಲ ಜೀವರಾಶಿಗೂ ಜೀವ-ಜೀವನವು ಬಲು ಪ್ರಧಾನ
ಇದ ಅರಿತು ನಡೆ ಮನುಜ ಎಲ್ಲರೂ ಒಂದೇ ಸಮಾನ
ಕೈಲಾಗದವೆಂದು ಶೋಷಿಸದಿರು ನೀ ಅನುದಿನ
ಪ್ರತೀಕಾರ ತೀರಿಸಲು ಬಂದಿದೆ ನೋಡು ಸಣ್ಣ ಕೊರೋನ

ಕ್ಷಣದಲೇ ಬದಲಾಗಿ ಹೋಯಿತು ನಮ್ಮಯ ಜೀವನ
ಜೀವ ಭಯದಿಂದ ನಾಲ್ಕು ಗೋಡೆಯೊಳಗೆ ಬಂಧನ
ಮನುಜನ ಕಾಟ ಇಲ್ಲದೇ ಪ್ರಕೃತಿಗೆ ಅಮೃತ ಸಿಂಚನ
ಆದರೆ ನಮ್ಮ ಬದುಕು ಭಯದ ನೆರಳಲಿ ಅನುದಿನ

ಬೇಡವೇ ಬೇಡ ನೈಸರ್ಗಿಕ ಹಸಿರು ಪರಿಸರದ ನಾಶ
ನಗರೀಕರಣ ಆಧುನೀಕರಣದಿಂದಲೇ ನಮ್ಮ ವಿನಾಶ
ಹಣ ಹಿಂದೆ ಓಡುತ ಹಾಕಬೇಡ ಬಗೆಬಗೆಯ ವೇಷ
ಕಳೆದುಕೊಳ್ಳಬೇಡ ಈ ಕ್ಷಣದ ಜೀವನದ ಸಂತೋಷ

ಗುರುವಾರ, ಜುಲೈ 8, 2021

ದೇವಾ..

ಜೀವ ಜೀವನವೂ ನಿನದೇ ದೇವಾ
ಅರ್ಪಿಸುವೆ ಶುದ್ಧ ಮನದಿ ಹೂವಾ

ಪರಿಪರಿ ಕಷ್ಟದಲಿ ಬಳಲಿದೆ ಈ ಜೀವಾ
ಬಿಚ್ಚಿಡುವೆ ಮನದಿ ಅಡಗಿದ ನೋವಾ
ಪರಿತಾಪವ ಪರಿಹರಿಸು ನೀ ದೇವಾ
ಸಂತೈಸು ಬಳಲಿರುವ ಈ ಮನವಾ

ಬೇಸರವೀ ಜೀವನದ ಯಾನ
ಸಹಿಸಲಾರೆ ನೀರಸವಾದ ಮೌನ
ಕಂಗಳಲಿ ನೋವಿನದೇ ಕಥನ
ಮನದಿ ಮೂಡಿದೆ ಕಣ್ಣೀರ ಕವನ

ಮೂರು ದಿನದ ನಮ್ಮ ಜೀವನವು
ಆಸೆಯಲೆಯ ಮೇಲೆ ಪಯಣವು
ಅಪರಿಮಿತ ಅಮೂರ್ತ ಭಾವವು
ಭರವಸೆಯಲಿ ಸಾಗುತಿದೆ ಜೀವನವು


ವೇದಾವತಿ ಭಟ್ಟ 
ಮುಂಬೈ 

ಬುಧವಾರ, ಜುಲೈ 7, 2021

ಬಣ್ಣದ ಓಕುಳಿ

ಬಣ್ಣದ ಓಕುಳಿ

ಬಂದಿತು ಕಾಮನ ಸುಡುವ ಹಬ್ಬ ಹೋಳಿ
ಸಂತಸವ ತುಂಬಿ ತಂದಿದೆ ಬಣ್ಣಗಳ ಓಕುಳಿ
ಬಣ್ಣಗಳ ಸಂಗಮದಿ ಸಂಭ್ರಮದ ಕಚಗುಳಿ
ನವ ಹುರುಪಲಿ ಮತ್ತೆ ಬರುವುದು ಮರಳಿ

ಬದುಕಿನ ಹಾದಿಯಲಿ ಭಾವಗಳ ಸಮಾಗಮ
ಒಂದೊಂದು ಭಾವವೂ ಒಂದೊಂದು ಬಣ್ಣ
ಹೋಳಿಯಲಿ ಬಗೆ ಬಗೆಯ ಬಣ್ಣಗಳ ಸಂಗಮ
ಕಾಮನಬಿಲ್ಲನೇ ಭುವಿಗಿಳಿಸಿತು ಈ ಬಣ್ಣ

ವರುಷಕ್ಕೊಮ್ಮೆ ಹರುಷವನು ತುಂಬುತಲಿ
ರಾಧೆ-ಶ್ಯಾಮರ ನೆನಪು ತರಿಸುತಲಿ ಬಂದಿತು
ಒಂದಾಗಿ ಬಾಳುವ ಐಕ್ಯತೆಯನು ಸಾರುತ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು

ವಸಂತನ ಸ್ವಾಗತಿಸುವ ಹುಣ್ಣಿಮೆಯ ಹಬ್ಬ
ರಂಗುರಂಗಿನ ಬಣ್ಣಗಳ ಲಾಸ್ಯವು ಸುಂದರ
ಎಲ್ಲರನೂ ಒಗ್ಗೂಡಿಸುತ ದ್ವೇಷ-ರೋಷ
ನೋವು ಮರೆಸುತಲಿ ಖುಷಿಯ ಹಂದರ

ವೇದಾವತಿ ಭಟ್ಟ
ಮುಂಬೈ