ಶುಕ್ರವಾರ, ಫೆಬ್ರವರಿ 22, 2019

ಸೌಂದರ್ಯ ಲಹರಿ

ಭೂರಮೆಯ ಸಿಂಗಾರ
ಹಸಿರು ವನ ಬಂಗಾರ
ಮಳೆಹನಿಯ ಪನ್ನೀರ
ರವಿ ಬೆಳಕೆ ಸಿಂಧೂರ

ಎಲೆಯೆಲೆಯಲೂ ಸೊಬಗು
ಮಗುವಿನ ನಗುವಿನ ಬೆಡಗು
ಸುತ್ತಲೂ ಚೆಲ್ಲಿದೆ ಬೆಳ್ಳಿ ಬೆಳಗು
ಮುತ್ತಿನಂತ ಹನಿಯ ಮೆರಗು

ಮಳೆ ಸುರಿಯೇ ಪಟಪಟ
ಮನಕಾನಂದ ಬಾಲೆಯಾಟ
ನೀರೊಡನೆ ಚೆಲ್ಲಾಟ
ಹಸಿರೊಡನೆ ತುಂಟಾಟ

ಕತ್ತಲಾಗುವ ಮೊದಲು
ಸೇರು ಅಮ್ಮನ ಮಡಿಲು
ಅದು ಪ್ರೀತಿಯ ಕಡಲು
ಮಮತೆ ತುಂಬಿದ ಒಡಲು

               ಪಂಚಮ ವೇದಾ...

ತಿರುವು

ಬಾಳ ಪುಟದಲಿ ತಿರುಗಳು ಹತ್ತಾರು
ನಡೆವ ದಾರಿಯಲ್ಲಿ ತಿರುವು ನೂರಾರು
ಜೀವನದ ತುಂಬಾ ನೆನಪಿನ ಕಾರುಬಾರು
ಬದುಕಿಗಾಗಿ ಸುತ್ತಬೇಕು ಊರೂರು

ಹುಡುಕಬೇಕಾಗಿದೆ ನೆಮ್ಮದಿಯ ಸೂರು
ಅದೆಲ್ಲಿದೆಯೋ ಸೊಬಗಿನ ತವರು
ಕೂಡಿಸಬೇಕಾಗಿದೆ ಕನಸುಗಳು ಚೂರು
ತೊಡಕುಗಳಿವೆ ಹತ್ತು ಹಲವಾರು

ಸಿಗುತಿಲ್ಲ ಅರಸಿದರೂ ಹನಿ ನೀರು
ಹರಡಿದೆ ಎಲ್ಲೆಲ್ಲೂ ಬೇಸರದ  ಬೇರು
ಕಮರುತಿದೆ ಇಂದು ಸ್ನೇಹದ ಚಿಗುರು
ದೂರಾಗಿದೆ ಭಾವಗಳ  ನವಿರು

ಬರಲಿ ಬೇಗ ಸಮಾಧಾನದ ನಿಟ್ಟುಸಿರು
ಬಾಳ ತುಂಬೆಲ್ಲ ತುಂಬಲಿ ಹಸಿರು
ಕರಗಿ ಹೋಗಲಿ ತುಂಬಿರು ಕೆಸರು
ಅಂತ್ಯಗೊಳ್ಳಲಿ ಬದುಕಿನೆಲ್ಲ ತಕರಾರು
    
                     ಪಂಚಮ ವೇದಾ....