ಬುಧವಾರ, ಏಪ್ರಿಲ್ 13, 2022

ಮೂಕರಾಗ


09/04/2022 - ಕುಂದಾನಗರಿ

ನನ್ನ ಹೃದಯವೆಂಬ ಹೂಬನದೊಳಗೆ
ಮತ್ತದೇ ನೆನಪುಗಳ ನರ್ತನ ಮನದೊಳಗೆ
ಚಿವುಟಿ ಹಾಕಿದರೂ ಮತ್ತೆ ಹುಟ್ಟುವ ಕಳೆಯಂತೆ
ಮೊಳೆಯುತಿದೆ ಭಾವಗಳು ಒಳಗೊಳಗೆ...

ನೆನಪಿನ ಸುಳಿಯೊಳಗೆ ಕೊಚ್ಚಿ ಹೋಗುತಿರುವೆ
ನನ್ನೊಳಗೆ ನಾನೇ ಕಳೆದು ಹೋಗಿರುವೆ
ತೀರ ಸಿಗದ ನೌಕೆಯ ಪಯಣಿಗನು ನಾನು
ಭಾವದ ಶರಧಿಯೊಳಗೆ ಮುಳುಗುತಿರುವೆ...

ಒಲವಿನ ಸವಿಯೂಟಕೆ ಕಾದಿದೆ ಮನವು
ನಿನ್ನಾಗಮನದ ಚಡಪಡಿಕೆ ನಿರಂತರವು
ಮರೀಚಿಕೆಯು ಒಲವ ಅಮೃತ ಧಾರೆಯು
ನಿನ್ನ ಪಿಸುಮಾತಿಗಾಗಿ ಮನದ ಹುಡುಕಾಟವು

ಬೆಂಬಿಡದೆ ಕಾಡುತಿದೆ ತುದಿ ಬೆರಳ ಸ್ಪರ್ಶ
ಮನಕೆ ಇನ್ನಿಲ್ಲದೇ ತಂದಿದೆ ಆ ಕ್ಷಣವು ಹರ್ಷ
ನೆನಪಿನಲಿಯಲಿ ತೇಲುತಿಹ ಮನದಲಿ
ಹೊರಬರದೇ ಮೂಕರಾಗದ ಸಂಘರ್ಷ