ಬುಧವಾರ, ನವೆಂಬರ್ 28, 2018

ಶ್ರೀ ತಳಸಿ

ಚಂದದಿ ತುಳಸಿ ಪೂಜೆಯ ಮಾಡುವಾ
ಆದರದಿ ಶ್ರೀಹರಿಯರಸಿ ಪೂಜೆಗೈಯುವಾ
ಸ್ಥಿರ ಮುತ್ತೈದೆ ಭಾಗ್ಯವ ಹೊಂದುವಾ
ಮನೆ ಮನಕೆ ಸುಖ ಸಂಪದ ಬೇಡುವಾ

ಕಾರ್ತೀಕ ಮಾಸದ ದ್ವಾದಶಿ ದಿವಸ
ಶ್ರೀ ತುಳಸಿಗೆ ಮದುವೆಯ ಹರುಷ
ನೆಲ್ಲಿಯ ರೂಪದಿ ಬರುವನು ಅರಸ
ಎಲ್ಲರ ಮನೆಯಲೂ ತುಂಬಿ ಸಂತಸ

ಬಾಳೆ ಕಬ್ಬಿನ ಮಂಟಪ ಕಟ್ಟುವಾ
ವಿಧ ವಿಧ ಭಕ್ಷ್ಯವ ಮಾತೆಗೆ ಮಾಡುವಾ
ಪನಿವಾರವ ಹರುಷದಿ ಹಂಚುವಾ
ದೀಪದ ಬೆಳಕಿಲಿ ಪೂಜೆಯ ಗೈಯುವಾ

ಕಷಾಯದಿಂದ ರೋಗದ ಶಮನ
ತುಳಸಿ ಇಲ್ಲದೇ ನಡೆಯದು ದಾನ
ಹೋಮ ಹವನದಿ ಮೊದಲನೇ ಸ್ಥಾನ
ತುಳಸಿ ಮಾತೆ ನಿನಗಿದೋ ನಮನ

ಮನೆಯಂಗಳದಲಿ ನೀನೇ ಲಕ್ಷಣ
ಚೈತನ್ಯ ತುಂಬುವೇ ನೀ ಕಣಕಣ
ವೃದ್ಧಿಸುವೆ ನೀ ಮನುಜನ ಪ್ರಾಣ
ಸೇವೆಯ ಮಾಡುವ ನಿನ್ನೀ ಚರಣ

            ಪಂಚಮ ವೇದಾ...

ಕವನದ ಸಾಲುಗಳು..

ನಿನ್ನ ಕವನದ ಸಾಲುಗಳು
ಅದ್ಭುತ, ಅಮೋಘ, ಅನಂತ..
ಅವರ್ಣನೀಯ ಪದಗಳ
ಮನದಾಳದ ಭಾವಗಳ ಮಿಡಿತ..

ನಿನ್ನ ಕವನದ ಸಾಲುಗಳು
ಭೂರಮೆ ಹಸಿರು ಸಿರಿಯಂತೆ..
ಕಣ್ಮನಕೆ ಸೊಗ ತರುವ
ಅಮೃತದ ಸಿಂಚನ..

ನಿನ್ನ ಕವನದ ಸಾಲುಗಳು
ಚಿತ್ತಾಕರ್ಷಕ ಪದಗಳ ಪುಂಜ..
ಸೋತ ಮನಕೆ ಸಾಂತ್ವನದ
ಬೆಳಕು ತರುವ ದೀವಿಗೆ..

ನಿನ್ನ ಕವನದ ಸಾಲುಗಳು
ದಾರಿ ತಪ್ಪಿದ ಬದುಕ..
ಸರಿ ದಾರಿಯಲಿ ನಡೆಸುವ
ದಿಕ್ಸೂಚಿ, ದಾರಿ ದೀಪ..
       
       ಪಂಚಮ ವೇದಾ...

ನಿರೀಕ್ಷೆ

ಹುಣ್ಣಿಮೆಯ ಚಂದ್ರನ ಬೆಳಕೂ
ಸುಡು ಬಿಸಿಲಂತಾಗಿದೆ..
ಶಾಂತ ಸರೋವರದಲೂ
ಸುನಾಮಿ ಎದ್ದಬ್ಬರಿಸಿದೆ..

ಒಲವು ಧಾರೆ ಬತ್ತಿ
ಮನಕೀಗ ನೋವಾಗಿದೆ..
ಬೇಸರದ ಬೇಗುದಿಗೆ
ಮನ ಮೂಕವಾಗಿದೆ..

ಒಡಲಾಳ ಕಹಿ ಸತ್ಯ
ಕಥೆಯ ಗೂಡಾಗಿದೆ..
ನಗುವೆಂಬುದು ಮರುಭೂಮಿ
ಮರೀಚಿಕೆಯಂತಾಗಿದೆ..

ಮನದ ತೊಳಲಾಟಕೆ
ಕನಸೂ ಕೂಡ ನಡುಗಿದೆ..
ಭಾವದ ಬೀಕರತೆಗೆ
ಕಣ್ಣಂಚಲೀ ಕಣ್ಣೀರಿದೆ..

ಈ ಮೌನ ಕಲಹದ ವಿರಹಕೆ
ದೊರಕುವುದೇ ವಿರಾಮ..
ಬರಡಾದ ಖಾಲಿ ಹೃದಯದಲಿ
ಆಗುವುದೇ ಮಧುರ ಭಾವದಾಗಮ..

            ಪಂಚಮ ವೇದಾ...

ಕಾಂಚಾಣ

ಝಣ ಝಣ ಈ ಕಾಂಚಾಣ
ನೆಮ್ಮದಿ ಕೆಡಲು ಇದು ಕಾರಣ
ಹರಡಿದೆ ಬರೀ ಹಗರಣ
ಇರದು ಹಣವಿರದ ತಾಣ...

ಕಾಕಿ, ಕಾದಿ, ಕಾವಿ ಎಲ್ಲರೂ
ಶರಣು ಈ ನೋಟಿಗೆ ಮೋಡಿಗೆ
ವೋಟು ಮಾರಾಟ ಕೋಟಿಗೆ
ಇದುವೇ ಔಷಧವೂ ನೋವಿಗೆ...

ಈ ಹಣದ ಮಹಿಮೆ ಅಪಾರ
ಇದರ ಮುಂದೆ ಮಾಯ ಕನಿಕರ
ಹಣವೇ ಸರಿ ಮಾಡುವುದು ಗ್ರಹಚಾರ
ಬದಲಾಗಿದೆ ಜನರ ಆಚಾರ-ವಿಚಾರ...

ಕೂಡಿಟ್ಟಿರುವರು ಕೋಟಿ ಕೋಟಿ
ಮಾಡುವರು ದೇಶದ ಲೂಟಿ
ಬಡವರಿಗೆ ಬರಿ ಏಟಿನ ಚಾಟಿ
ಹಿಡಿದಿರುವರು ಬರಿಯ ಮೇಟಿ...

       ಪಂಚಮ ವೇದಾ....

ಮಗಳು

ಮಗಳೆಂದರೆ ಮನಸಿನ ಸ್ಪಂದನ
ಭಾವಗಳ ನವಿರಾದ ಬಂಧನ

ಅಪ್ಪನಿಗೆ ಭಾವದಲೆಯ ಸೋಕಿಸುವ ಗುರು
ಅಮ್ಮನಿಗೆ ಸೋನೆ ಮಳೆಯ ತುಂತುರು

ಪ್ರತಿ ಭಾವಕೂ ಇವಳೇ ನೀಡುವಳು ಜೀವ
ಜೀವನವನಾಗಿಸುವಳು ಸುಂದರ ಹೂವ

ಅಪ್ಪನ ಸುಪ್ತ ಪ್ರೀತಿಯ ಹೊರಹಾಕುವ ಬಾಲೆ
ಅಮ್ಮನಿಗಿವಳು ಮಮತೆಯ ಹೂಮಾಲೆ

ತವರಿನಲಿ ಇವಳು ಶ್ರೀಲಕ್ಷ್ಮೀಯ ರೂಪ
ಕೊಟ್ಟ ಮನೆಯನೂ ಬೆಳಗುವ ನಂದಾದೀಪ

     ಪಂಚಮ ವೇದಾ...

ಬರಸಿಡಿಲು

ದುತ್ತೆಂದು ಬಂದೆರಗಿತು ಆ ದಿಗಿಲು
ಕಿತ್ತು ಬಿಸಾಡಿತು ಪೋಷಿಸುವ ಒಡಲು
ದೂರಾಯಿತು ಮಮತೆಯ ಮಡಿಲು
ಬಂದೆರಗಿತು ಭೀಕರ ಬರಸಿಡಿಲು

ಧರೆಯ ನೋಡಲು ಇನ್ನಿಲ್ಲ ಅವಕಾಶ
ಅದಾಗಲೇ ಬಂಧಿಸಿದೆ ಯಮಪಾಶ
ಖಚಿತವಾಗಿದೆ ಮೊಳಕೆಯಲೇ ನಾಶ
ತಿಳಿದವರಿಂದಲೇ ಶುರು ಈ ವಿನಾಶ

ನನ್ನಂಥ ಪಾಪದ ಪಿಂಡಗಳು ಹಲವಾರು
ಕೊಲೆಗೈಯಲು ಕಾರಣಗಳು ಹತ್ತಾರು
ಮೂಲ ಅತಿಯಾಗಿ ಬೆಳೆದ ವಿಜ್ಞಾನದ ಬೇರು
ಇದನೆಲ್ಲ ತಡೆಯುವ ದೇವಮಾನವನಾರು??

ಅರಿಯದ ಜೀವಕೆ ಒದಗಿಹುದು ಶಿಕ್ಷೆ
ಬೇಡಿದರೂ ಸಿಗುತಿಲ್ಲ ಪ್ರಾಣದ ಭಿಕ್ಷೆ
ಕೊಲೆಗಡುಕರಾಗುವವರು ಕೊಡುವರೇ ರಕ್ಷೆ
ಅಧಃಪತನವಾಗುತಿದೆ ಮಾನವೀಯತೆಯ ಸುಭೀಕ್ಷೆ

        ಪಂಚಮ ವೇದಾ...