ಶನಿವಾರ, ಜನವರಿ 18, 2020

ಜೀವನ ಪಯಣ

ಅವರ ಜೊತೆ ಅವರಂತೆ
ಇವರ ಜೊತೆ ಇವರಂತೆ
ಅಲ್ಲಿಯದ ಅಲ್ಲಿ ಬಿಟ್ಟು 
ಇಲ್ಲಿಯದು ಇಲ್ಲೇ ಬಿಟ್ಟು
ಹೊಂದಿಕೊಂಡು ಹೋಗುವುದೇ
ಸುಗಮ ಜೀವನದ ಸೂತ್ರ...

ಅಹಂಕಾರ ಬದಿಗಿರಿಸಿ
ಮಾತ್ಸರ್ಯ ಹೊಡೆದೋಡಿಸಿ
ಚುಚ್ಚು ಮಾತುಗಳ ಕೇಳಿಯೂ ಕೇಳದಂತೆ
ದ್ವೇಷ-ರೋಷ ಬಳಿಯೂ ಸುಳಿಯದಂತೆ
ನಗುವಿನುತ್ತರ ನೀಡುತ ಸಾಗುವುದೇ
ನಮ್ಮ ನಿಮ್ಮೆಲ್ಲರ ಜೀವನದ ಪಾತ್ರ...

ನಾನೆಂಬ ಮಾಯೆಯ ಮರೆತು
ಎಲ್ಲರೊಡಗೂಡಿ ಬೆರೆತು
ಕೋಪತಾಪಗಳ ದೂರವಿರಿಸಿ
ಸಹಬಾಳ್ವೆಯ ಚಿತ್ತಾರ ಬಿಡಿಸಿ 
ಸಂತೋಷವ ಹಂಚುತಾ ಬಾಳುವಾ
ಈ ಬದುಕು ಬರೀ ನಾಲ್ಕು ದಿನ ಮಾತ್ರ...

ಬದುಕು ಸಾಗುವುದು ನದಿಯಂತೆ
ಇದು ಸುಖ-ದುಃಖಗಳ ಸಂತೆ
ಬೆಸೆಯುವುದು ಹೊಸ ನಂಟು
ಒಯ್ಯಲಾಗದು ಎಷ್ಟಿದ್ದರೂ ಗಂಟು
ಗಳಿಸಿದ ಜನರು ಮಾತ್ರ ಉಪಕಾರ 
ಸ್ಮರಿಸುತ್ತ ಬರುವರು ಕೊನೆಗೆ ಹತ್ತಿರ...

ಸೋಮವಾರ, ಜನವರಿ 13, 2020

ಹನಿಗವನ 1

ಪ್ರಶ್ನಾರ್ಥಕ 
ಹಲವು ವೇಷ ಬದುಕಲು ಅಗತ್ಯ ಕೆಲವರಿಗೆ
ಶೋಕಿಗಾಗಿ ವೇಷ ಹಾಕುವ ಕರ್ಮ ಹಲವರಿಗೆ
ಅನ್ನವಿಲ್ಲದೇ ಪರಿತಪಿಸುವರು ಹಲವರು
ಬೆಲೆತೆತ್ತು ಅನ್ನ ಚೆಲ್ಲುವರು ಕೆಲವರು...

ಜೀವನ
ಬಾರದು ಮತ್ತೆ ಕಳೆದಿರುವ ಕ್ಷಣ
ಸವಿಯಬಹುದು ನೆನಪಿನ ಹೂರಣ
ಸಿಹಿ-ಕಹಿ ಎರಡೂ ಉಂಟು ಬದುಕಲಿ
ನೋವು-ನಲಿವೆಂಬ ಮುಖವು ಬಾಳಲಿ
ಬೇಸರಿಸದೆ ಸಂತಸದಿ ತಾ ಬದುಕಿ
ಬದುಕಕೊಟ್ಟರೆಲ್ಲರಿಗೂ  ಬಾಳು ಸುಖಕರ 

ನಿದ್ದೆ
ನಿದ್ದೆ ನಿದ್ದೆ ನಿದ್ದೆ ನಿದ್ದೆ 
ಪತಿರಾಯನಿಗೆ ಯಾವಾಗಲೂ ಇದ್ದಿದ್ದೆ
ಕೇಳಿದರೆ ನಿಮಗೆ ಯಾಕಿಷ್ಟು ನಿದ್ದೆ
ಬರುವ ಉತ್ತರ ನೋಡಿ...
ನಿನ್ನದು ರಾಮಾಯಣ ಯಾವಾಗಲೂ ಇದ್ದಿದ್ದೆ

ಪಾರಾಯಣ 
ಹಗಲಲಿ ಓದಿಸುವರು ದೇವಿ ಪಾರಾಯಣ
ರಾತ್ರಿ ಮಾಡುವರು ಹದಿಮೂರೆಲೆಯ ಪಾರಾಯಣ
ಬೆಳಿಗ್ಗೆ ಹೆಂಡತಿಯಿಂದ ಮಹಾಭಾರತ ರಾಮಾಯಣ 
ಜಪಭಜನೆ ಮಾಡುವರು ನಾರಾಯಣ ನಾರಾಯಣ 





 

ಶುಕ್ರವಾರ, ಜನವರಿ 10, 2020

ಮತ್ತದೇ ಮೌನ..

ಮನಸು ಮುಗಿಲೆತ್ತರಕೆ 
ಹಾರಿ ಸಂಭ್ರಮದಿ
ಮಿಂದೇಳುತಲಿದೆ..
     ಆದರೆ ಅದೇಕೋ ಮತ್ತದೇ ಮೌನ....

ಎಲ್ಲವೂ ಹಿತ ಮನಕೆ
ತಂಪಾದ ತಂಗಾಳಿಯಲಿ
ಓಲೈಸುತಿದೆ..
    ಆದರೆ ಅದೇಕೋ ಮತ್ತದೇ ಮೌನ....

ತುಂತುರು ಮಳೆಯ 
ಮಣ್ಣ ವಾಸನೆಯಲಿ
ಮನ ನರ್ತಿಸುತಿದೆ..
    ಆದರೆ ಅದೇಕೋ ಮತ್ತದೇ ಮೌನ....

ಹುಣ್ಣಿಮೆ ಬೆಳದಿಂಗಳಲಿ
ನೈದಿಲೆಯ ನೋಡಿ
ಮನ ಮುದಗೊಂಡಿದೆ..
    ಆದರೆ ಅದೇಕೋ ಮತ್ತದೇ ಮೌನ....

ಸಖನ ಸವಿ ನುಡಿಗೆ
ಖುಷಿಯ ಮೇರೆಮೀರಿ
ಮನ ಪುಳಕಿತವಾಗಿದೆ..
    ಆದರೆ ಅದೇಕೋ ಮತ್ತದೇ ಮೌನ....

ಬಾಳ ಪಯಣದಲಿ
ಕಹಿಯನೆಲ್ಲ ಹಿಂದಿಕ್ಕಿ
ಮನ ಸಿಹಿಯಾಗಿದೆ.. 
    ಆದರೆ ಅದೇಕೋ ಮತ್ತದೇ ಮೌನ....

ಒಲವ ಜಿನುಗಿ
ದ್ವೇಷ ಕರಗಿ
ಮನ ಹಸಿರಾಗಿದೆ.. 
   ಆದರೆ ಅದೇಕೋ ಮತ್ತದೇ ಮೌನ....

ಕಾರಣ ತಿಳಿದು
ತಿಳಿಯದೇ ಮನ
ಗೊಂದಲದ ಗೂಡಾಗಿದೆ..
    ಆದರೆ ಅದೇಕೋ ಮತ್ತದೇ ಮೌನ....