ಶನಿವಾರ, ಜನವರಿ 18, 2020

ಜೀವನ ಪಯಣ

ಅವರ ಜೊತೆ ಅವರಂತೆ
ಇವರ ಜೊತೆ ಇವರಂತೆ
ಅಲ್ಲಿಯದ ಅಲ್ಲಿ ಬಿಟ್ಟು 
ಇಲ್ಲಿಯದು ಇಲ್ಲೇ ಬಿಟ್ಟು
ಹೊಂದಿಕೊಂಡು ಹೋಗುವುದೇ
ಸುಗಮ ಜೀವನದ ಸೂತ್ರ...

ಅಹಂಕಾರ ಬದಿಗಿರಿಸಿ
ಮಾತ್ಸರ್ಯ ಹೊಡೆದೋಡಿಸಿ
ಚುಚ್ಚು ಮಾತುಗಳ ಕೇಳಿಯೂ ಕೇಳದಂತೆ
ದ್ವೇಷ-ರೋಷ ಬಳಿಯೂ ಸುಳಿಯದಂತೆ
ನಗುವಿನುತ್ತರ ನೀಡುತ ಸಾಗುವುದೇ
ನಮ್ಮ ನಿಮ್ಮೆಲ್ಲರ ಜೀವನದ ಪಾತ್ರ...

ನಾನೆಂಬ ಮಾಯೆಯ ಮರೆತು
ಎಲ್ಲರೊಡಗೂಡಿ ಬೆರೆತು
ಕೋಪತಾಪಗಳ ದೂರವಿರಿಸಿ
ಸಹಬಾಳ್ವೆಯ ಚಿತ್ತಾರ ಬಿಡಿಸಿ 
ಸಂತೋಷವ ಹಂಚುತಾ ಬಾಳುವಾ
ಈ ಬದುಕು ಬರೀ ನಾಲ್ಕು ದಿನ ಮಾತ್ರ...

ಬದುಕು ಸಾಗುವುದು ನದಿಯಂತೆ
ಇದು ಸುಖ-ದುಃಖಗಳ ಸಂತೆ
ಬೆಸೆಯುವುದು ಹೊಸ ನಂಟು
ಒಯ್ಯಲಾಗದು ಎಷ್ಟಿದ್ದರೂ ಗಂಟು
ಗಳಿಸಿದ ಜನರು ಮಾತ್ರ ಉಪಕಾರ 
ಸ್ಮರಿಸುತ್ತ ಬರುವರು ಕೊನೆಗೆ ಹತ್ತಿರ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ