ಬುಧವಾರ, ಜುಲೈ 14, 2021

ಜೀವ ಜೀವನ


ಜೀವವು ಇದ್ದರೆ ಜೀವನ ಎನ್ನುವಂತಾಗಿದೆ ಸ್ಥಿತಿ ಇಂದು
ಜೀವಿಯ ಜೀವದ ಜೊತೆ ಆಟವಾಡಿದ ಮನುಜ ಅಂದು
ಸ್ವಾರ್ಥದ ಜೀವನವು ಬೇಡ ಹೇ ಮನುಜ ಎಂದೆಂದೂ
ಯೋಚಿಸಿ ಕೆಲಸವನು ಮಾಡುವ ಹಿಂದು-ಮುಂದು

ಎಲ್ಲ ಜೀವರಾಶಿಗೂ ಜೀವ-ಜೀವನವು ಬಲು ಪ್ರಧಾನ
ಇದ ಅರಿತು ನಡೆ ಮನುಜ ಎಲ್ಲರೂ ಒಂದೇ ಸಮಾನ
ಕೈಲಾಗದವೆಂದು ಶೋಷಿಸದಿರು ನೀ ಅನುದಿನ
ಪ್ರತೀಕಾರ ತೀರಿಸಲು ಬಂದಿದೆ ನೋಡು ಸಣ್ಣ ಕೊರೋನ

ಕ್ಷಣದಲೇ ಬದಲಾಗಿ ಹೋಯಿತು ನಮ್ಮಯ ಜೀವನ
ಜೀವ ಭಯದಿಂದ ನಾಲ್ಕು ಗೋಡೆಯೊಳಗೆ ಬಂಧನ
ಮನುಜನ ಕಾಟ ಇಲ್ಲದೇ ಪ್ರಕೃತಿಗೆ ಅಮೃತ ಸಿಂಚನ
ಆದರೆ ನಮ್ಮ ಬದುಕು ಭಯದ ನೆರಳಲಿ ಅನುದಿನ

ಬೇಡವೇ ಬೇಡ ನೈಸರ್ಗಿಕ ಹಸಿರು ಪರಿಸರದ ನಾಶ
ನಗರೀಕರಣ ಆಧುನೀಕರಣದಿಂದಲೇ ನಮ್ಮ ವಿನಾಶ
ಹಣ ಹಿಂದೆ ಓಡುತ ಹಾಕಬೇಡ ಬಗೆಬಗೆಯ ವೇಷ
ಕಳೆದುಕೊಳ್ಳಬೇಡ ಈ ಕ್ಷಣದ ಜೀವನದ ಸಂತೋಷ

ಗುರುವಾರ, ಜುಲೈ 8, 2021

ದೇವಾ..

ಜೀವ ಜೀವನವೂ ನಿನದೇ ದೇವಾ
ಅರ್ಪಿಸುವೆ ಶುದ್ಧ ಮನದಿ ಹೂವಾ

ಪರಿಪರಿ ಕಷ್ಟದಲಿ ಬಳಲಿದೆ ಈ ಜೀವಾ
ಬಿಚ್ಚಿಡುವೆ ಮನದಿ ಅಡಗಿದ ನೋವಾ
ಪರಿತಾಪವ ಪರಿಹರಿಸು ನೀ ದೇವಾ
ಸಂತೈಸು ಬಳಲಿರುವ ಈ ಮನವಾ

ಬೇಸರವೀ ಜೀವನದ ಯಾನ
ಸಹಿಸಲಾರೆ ನೀರಸವಾದ ಮೌನ
ಕಂಗಳಲಿ ನೋವಿನದೇ ಕಥನ
ಮನದಿ ಮೂಡಿದೆ ಕಣ್ಣೀರ ಕವನ

ಮೂರು ದಿನದ ನಮ್ಮ ಜೀವನವು
ಆಸೆಯಲೆಯ ಮೇಲೆ ಪಯಣವು
ಅಪರಿಮಿತ ಅಮೂರ್ತ ಭಾವವು
ಭರವಸೆಯಲಿ ಸಾಗುತಿದೆ ಜೀವನವು


ವೇದಾವತಿ ಭಟ್ಟ 
ಮುಂಬೈ 

ಬುಧವಾರ, ಜುಲೈ 7, 2021

ಬಣ್ಣದ ಓಕುಳಿ

ಬಣ್ಣದ ಓಕುಳಿ

ಬಂದಿತು ಕಾಮನ ಸುಡುವ ಹಬ್ಬ ಹೋಳಿ
ಸಂತಸವ ತುಂಬಿ ತಂದಿದೆ ಬಣ್ಣಗಳ ಓಕುಳಿ
ಬಣ್ಣಗಳ ಸಂಗಮದಿ ಸಂಭ್ರಮದ ಕಚಗುಳಿ
ನವ ಹುರುಪಲಿ ಮತ್ತೆ ಬರುವುದು ಮರಳಿ

ಬದುಕಿನ ಹಾದಿಯಲಿ ಭಾವಗಳ ಸಮಾಗಮ
ಒಂದೊಂದು ಭಾವವೂ ಒಂದೊಂದು ಬಣ್ಣ
ಹೋಳಿಯಲಿ ಬಗೆ ಬಗೆಯ ಬಣ್ಣಗಳ ಸಂಗಮ
ಕಾಮನಬಿಲ್ಲನೇ ಭುವಿಗಿಳಿಸಿತು ಈ ಬಣ್ಣ

ವರುಷಕ್ಕೊಮ್ಮೆ ಹರುಷವನು ತುಂಬುತಲಿ
ರಾಧೆ-ಶ್ಯಾಮರ ನೆನಪು ತರಿಸುತಲಿ ಬಂದಿತು
ಒಂದಾಗಿ ಬಾಳುವ ಐಕ್ಯತೆಯನು ಸಾರುತ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು

ವಸಂತನ ಸ್ವಾಗತಿಸುವ ಹುಣ್ಣಿಮೆಯ ಹಬ್ಬ
ರಂಗುರಂಗಿನ ಬಣ್ಣಗಳ ಲಾಸ್ಯವು ಸುಂದರ
ಎಲ್ಲರನೂ ಒಗ್ಗೂಡಿಸುತ ದ್ವೇಷ-ರೋಷ
ನೋವು ಮರೆಸುತಲಿ ಖುಷಿಯ ಹಂದರ

ವೇದಾವತಿ ಭಟ್ಟ
ಮುಂಬೈ





ಪ್ರಕೃತಿ ಮಾತೆಯ ಕೂಗು

ಪ್ರಕೃತಿ ಮಾತೆಯ ಕೂಗು

ಇತ್ತೊಂದು ಕಾಲದಿ ಸುತ್ತಲೂ ಹಸಿರು
ಬೇಕಾಗಿರಲಿಲ್ಲ ಅಂದು ಸ್ವಾರ್ಥದ ಹೆಸರು
ಆಡಿಸಬಹುದಿತ್ತು ಸ್ವಚ್ಛಂದದ ಉಸಿರು
ಕೈ ಕೆರಾದರೆ ಬಾಯಿಗೆ ಸಿಗುತ್ತಿತ್ತು ಮೊಸರು

ಬದಲಾಯಿತು ನೋಡು ನೋಡುತಲೇ ಕಾಲ
ಆವರಿಸಿತು ಮನುಜನಿಗೆ ಹಣವೆಂಬ ಜಾಲ
ಆಸೆಯಿಂದ ಕೂಡಿದ ಮನದ ಬೆಂಬಲ
ಭ್ರೂಣದಲೇ ಹಸಿರು ಹತ್ಯೆ ಮಾಡುವ ಕಾಲ

ಕೇಳುವವರಿಲ್ಲ ಪ್ರಕೃತಿ ಮಾತೆಯ ಗೋಳನು
ಅವಳ ರೋಧನವು ಮುಟ್ಟಿತು ಮುಗಿಲನು
ಭವಿಷ್ಯದ ಚಿಂತೆ ಇಲ್ಲದ ಕಪಟಿ ಮಾನವನು
ಸ್ವಾರ್ಥಕಾಗಿ ಎಲ್ಲವನು ಹಾಳು ಮಾಡಿಹನು

ಅರಿತು ನಡೆದರೆ ಈ ಬದುಕು ಬಂಗಾರ
ಹಸಿರಿನ ಜೊತೆಗಿನ ಬದುಕೇ ಸುಂದರ
ಮತ್ತೆ ಹರಡುವ ಎಲ್ಲೆಲ್ಲೂ ಹಸಿರಿನ ಹಂದರ
ಸುತ್ತ ಹಸಿರು ಇರಲು ಬೇಡ ಬೇರೆ ಸಿಂಗಾರ

ಮುಂಗಾರಿನ ಲಾಸ್ಯ

ಮುಂಗಾರ ಹಸಿರು ಲಾಸ್ಯ

ಬಂದಿದೆ ಮುಂಗಾರು ಮಳೆ
ತಂಪಿನಲಿ ತೊಯ್ದಿತು ಇಳೆ
ತೊಳೆಯಿತು ಇಳೆಯ ಕೊಳೆ
ನಳನಳಿಸುತಿದೆ ಹಸಿರು ಬೆಳೆ

ಮುತ್ತಿನ ಹನಿಯ ಸಿಂಚನ
ತಂಪಾಗಿ ಹಿಗ್ಗಿದೆ ಮೈ-ಮನ
ಎಲ್ಲೆಲ್ಲೂ ಹಸಿರಿನ ಜನನ
ಇಳೆಯೀಗ ಇಂದ್ರನ ನಂದನ

ಜಲಲ ಧಾರೆಯ ಸವಿಗಾನ
ಕಳಚಿದೆ ಬೀಜದ ಬಂಧನ
ಹಸಿರು ಸಸಿಗಳದೇ ನರ್ತನ
ಹಲವು ಭಾವಗಳ ಜನನ

ಎಲ್ಲೆಲ್ಲೂ ಚಿಗುರು ಚಿಗುರಿದೆ
ಭುವಿಯು ಬಣ್ಣವಾಗಿದೆ
ತಂಗಾಳಿಯ ತಂಪು ಹರಡಿದೆ
ಮುಂಗಾರು ಮುದವ ತಂದಿದೆ

ಸತ್ಯಾಗ್ರಹ

ಹೂಡಿದೆ ಪ್ರಕೃತಿಯು ಸತ್ಯಾಗ್ರಹ
ಮುಂದಿಟ್ಟಿದೆ ತನ್ನಯ ಆಗ್ರಹ
ತತ್ತರಿಸಿದೆ ಭುವಿಯೆಂಬ ಗ್ರಹ
ಪಣವಾಗಿದೆ ಮನುಜನ ದೇಹ

ಹಿಂದೆ ಪರದಾಡಿತ್ತು ಜೀವರಾಶಿ
ತುಂಬಿತು ಮನುಜನ ಪಾಪದ ರಾಶಿ
ಇಂದು ಎಲ್ಲೆಲ್ಲೂ ಹೆಣದ ರಾಶಿ
ಕೊನೆಯಾಯ್ತು ಮನುಜನ ಖುಷಿ

ಗಾಳಿಗೆ ತೂರಿದ ಮೌಲ್ಯಗಳು, ನೀತಿ
ಸ್ವಾರ್ಥದ ಇರಬೇಕಿತ್ತು ಒಂದು ಮಿತಿ
ಮೀರಿದಾಗ ಒದಗಿ ಬಂತು ಈ ಗತಿ
ಹಣದಾಸೆಯು ಆಗಬಾರದು ಅತಿ

ಬದುಕಾಗಿದೆ ಇಂದು ಬಲು ದುಸ್ಥರ
ನಾಲ್ಕು ಗೋಡೆಯ ನಡುವೆ ಬೇಸರ
ಎಲ್ಲೆಡೆಯಲೂ ಕೇಳಿದೆ ಹಾಹಾಕಾರ
ಸಂಬಂಧಗಳು ಆದವು ಬಹುದೂರ

ಇನ್ನಾದರೂ ಬದಲಾಗಲಿ ಜೀವನ
ಸ್ವಾರ್ಥವ ತೊರೆದರೆ ಅದು ನಂದನ
ಕಳಚಲಿ ಸಕಲ ಪಾಪಗಳ ಬಂಧನ
ಜೀವನವಾಗಲಿ ಮುಂದೆ ವಿನೂತನ

ವೇದಾವತಿ ಭಟ್ಟ
ಮುಂಬೈ 

ಮೊದಲ ಮಳೆಯ ಪುಳಕ


ಮೊದಲ ಮಳೆಯ ಪುಳಕ ಮನಕೆ
ಮಯೂರಕೆ ನರ್ತನದ ಸುಬಯಕೆ
ಭುವಿಯು ಹಸಿರು ಸೀರೆಯ ಕನ್ನಿಕೆ
ನಯನಕೆ ಸ್ವರ್ಗವು ಬೇರೆ ಏತಕೆ??

ಸುರಿಯುತಿದೆ ಬಿಡದೆ ವರ್ಷಧಾರೆ
ಸುತ್ತಲೂ ಹರಿದಿದೆ ಜಲಲಧಾರೆ
ಇನಿತು ಸೊಬಗು ನಮ್ಮ ವಸುಂಧರೆ
ಇನಿಯನ ಕಾಯುವ ಈ ಮನೋಹರೆ

ಭಾರವಾಗಿದೆ ಹನಿಯಿಂದ ಮುಗಿಲು
ಹಸಿರು ಗಿಡದ ಮೇಲೆ ಹನಿ ಸಾಲು
ಎತ್ತ ನೋಡಿದರೂ ಹಸಿರು ಫಸಲು
ಆಘ್ರಾಣಿಸಲು ಮಣ್ಣಿನ ಈ ಘಮಲು

ವೇದಾವತಿ ಭಟ್ಟ
ಮುಂಬೈ 

ಬದುಕು


ಬದುಕೊಂದು ವಿಸ್ಮಯದ ಗೂಡು
ಕೆದಕಿದರೆ ಬಲು ಅದ್ಭುತಗಳ ಜಾಡು
ಬೆದರದೆ ಮುಂದಮುಂದಕೆ ಓಡು
ಹಿಂದಿರುಗಿ ಇತಿಹಾಸವ ನೋಡು

ಬಂಧನಗಳು ಬಾಳಲಿ ಹಲವು
ಚಂದದಲಿ ಇರುವವು ಕೆಲವು
ಸುಂದರವು ಈ ಬಾಂಧವ್ಯವು
ನಂದನವಾಗಲಿ ಈ ಜೀವನವು

ಕಷ್ಟಗಳು ಬಂದು ಹೋಗುವವು
ನಷ್ಟಗಳು ಇದ್ದೇ ಇರುವವು
ಇಷ್ಟವಾದುದೆಲ್ಲ ಸಿಗಲಾರವು
ಎಷ್ಟು ವಿಚಿತ್ರ ಈ ಜೀವನವು

ಸವಿ ನೆನಪುಗಳ ಜೀವನದಲಿ
ಸವಿಯುತ ಸಾಗವ ನಾವಿಲ್ಲಿ
ನಲಿವು ನೋವಿನ ಯಾನದಲಿ
ಬಲವು ತುಂಬಿ ಗೆಲುವಾಗಿರಲಿ

ವೇದಾವತಿ ಭಟ್ಟ
ಮುಂಬೈ 

ಮೌನ

ಮಾತೇ ಬಾರದ ನೀರಸ ಮೌನ
ಅತೀ ಬೇಸರವೆನಿಸಿದೆ ಜೀವನ ಯಾನ
ಬದುಕಾಗಿದೆ ಬರಿಯ ಕಹಿಯ ಹೂರಣ
ಎತ್ತಲೋ ಸಾಗಿದೆ ಬದುಕಿನ ಪಯಣ...

ಕಾಣದ ಕೈಯ ಆಟದಿ ಶೂನ್ಯ ಬದುಕು
ಮರೀಚಿಕೆಯಂತೆ ಸುಖವ ಹುಡುಕು
ಹಿತಬಯಸುವರು ಶತ್ರುಗಳ ಸಮಾನ
ಆಸೆ ಕನಸೆಲ್ಲವೂ ಬರೀ ಗಗನ ಕುಸುಮ...

ತಿರುಗಿದರೆ ಭಯಹುಟ್ಟಿಸುವ ಕರಾಳ ಮುಖ
ದಿಕ್ಕೆಟ್ಟ, ಕಂಗೆಟ್ಟ, ಕಾಂತೀಹೀನತೆ, ಸೂತಕ
ನಿರಾಸೆಯ ಮೃತ್ಯುಕೂಪದಲಿ ಬೆಂದ ಮನಸು
ಕೊಲೆಯಾಗಿದೆ ಕಂಡ ಎಲ್ಲ ಸಿಹಿ ಕನಸು

ನಂಬಿಕೆ ಎಂಬ ಪದಕೆ ಇಲ್ಲವು ಇಲ್ಲಿ ಬೆಲೆಯು
ಬೆನ್ನ ಹಿಂದೆ ಮೋಸ ವಂಚನೆಯ ಬಲೆಯು
ನಂಬಿದವರೇ ಬೆನ್ನಿಗೆ ಹಾಕುವರು ಚೂರಿ
ಜೊತೆಗೆ ವಿಧಿಯೂ ಆಗಿದೆ ಬಲು ಕ್ರೂರಿ

ಬೇಯುತಿದೆ ಜ್ವಾಲಾಮುಖಿಯ ಜ್ವಾಲೆಯಲಿ
ಮುಳುಗಿದೆ ಸೂತಕದಂತ ಯಾತನೆಯಲಿ
ಬಿಡುಗಡೆ ದೊರೆತರೂ ಧಿಕ್ಕರಿಸುವಂತಾಗಿದೆ
ನೋವಿನ ನಂಜಲ್ಲಿ ಹುದುಗಿ ಪರಿತಪಿಸುತಿದೆ...

ವೇದಾವತಿ ಭಟ್ಟ
ಮುಂಬೈ 

ಆರೋಗ್ಯ

ಎಲ್ಲದಕೂ ನಮಗೆ ಆರೋಗ್ಯ
ಇದುವೇ ಮೊದಲನೆಯ ಭಾಗ್ಯ
ಎಷ್ಟಿದ್ದರೇನು ಸಕಲ ಸೌಭಾಗ್ಯ??
ಎಲ್ಲ ಸವಿಯಲು ಬೇಕು ಆರೋಗ್ಯ

ಅತಿಯಾದರೆ ಸಿರಿ ಸಂಪತ್ತು
ಬರುವುದು ತಾನಾಗಿ ಆಪತ್ತು
ಆಸೆಪಡಬೇಡ ಪರರ ಸ್ವತ್ತು
ಅದಕಾಗಿ ಬೇಡವು ಕಸರತ್ತು

ಮೈಮುರಿದು ನೆಲದಿ ಉತ್ತಿ ಬಿತ್ತು
ಆಗ ದೊರೆಯುವುದು ಸಂಪತ್ತು
ದೇಹಸುಖ ಆತಿಯಾದರೆ ಕುತ್ತು
ಆರೋಗ್ಯಕ್ಕೆ ಬರುವುದು ಆಪತ್ತು

ದೇಹ ಸೌಖ್ಯವಿರಲು ಎಲ್ಲವೂ ಯೋಗ್ಯ
ಬೇಡುವ ಮೊದಲು ಆರೋಗ್ಯ ಭಾಗ್ಯ
ಇದುವೇ ಆಗಿಹುದು ಬಲು ಅನರ್ಘ್ಯ
ಇದು ತಿಳಿ ಮೊದಲು ನೀ ಅಯೋಗ್ಯ..!!

ವೇದಾವತಿ ಭಟ್ಟ
ಮುಂಬೈ 

ಬದಲಾವಣೆ

ಜೀವನವಿತ್ತು ಮೊದಲು ಬಲು ಸೊಗಸು
ಆದರೆ ಈಗ ಪ್ರಕೃತಿಯ ಮುನಿಸು
ಬಂದಿದೆ ಎಲ್ಲೆಡೆ ಕೊರೋನಾ ವೈರಸ್ಸು
ಭಗ್ನವಾಯಿತು ಎಲ್ಲರ ಮನದ ಕನಸು

ನಿತ್ಯದ ಜೀವನಕೂ ಈಗ ಪರದಾಟ
ಬಲ್ಲವರು ಯಾರು ಆ ದೇವನ ಆಟ
ಸಿಗುತ್ತಿಲ್ಲ ಬಡವರಿಗೆ ನಿತ್ಯದ ಊಟ
ಇನ್ನಾದರೂ ಮನುಜ ಕಲಿಯಲಿ ಪಾಠ

ಮನುಜನ ಆಸೆಗೆ ಇಲ್ಲವೂ ಮಿತಿ
ಕೊನೆಯಾಗುತ್ತಿಲ್ಲ ಭೀಕರ ಪರಿಸ್ಥಿತಿ
ಎಲ್ಲೆಡೆ ಆವರಿಸಿದೆ ರೋಗದ ಭೀತಿ
ಎಂದು ಬದಲಾಗುವುದು ಈ ಸ್ಥಿತಿ??

ವೇದಾವತಿ ಭಟ್ಟ
ಮುಂಬೈ



ಹಸಿರು

ಬೆಳೆಯುವ ಸಿರಿ ಮೊಳಕೆಯಲಿ
ಹಸಿರು ಸಸಿ ಮುಗ್ಧ ಮನದ ಕೈಲಿ
ಮಗುವ ಆರೈಕೆಯಲಿ ಮರವಾಗಲಿ
ಹಸಿರು ನಮಗೆಲ್ಲ ಉಸಿರಾಗಲಿ

ನೀತಿ ಪಾಠ ಮುಗ್ಧ ಮನಕೆ ಬೇಕು
ನೆಟ್ಟ ಸಸಿಗೆ ನೀರು ಗೊಬ್ಬರ ಬೇಕು
ಆಗ ಮಾತ್ರವೇ ಹಸನು ಬದುಕು
ಗಿಡ ಮರಗಳು ನಮಗೆ ಬೇಕು

ಹಸಿರು ನೆಡುತ ಬೆಳೆಸುವ ಕಾನನ
ಹಸಿರ ಸಿರಿಯಲಿ ಹಸನು ಜೀವನ
ಬದಲಾಗದಿರಲಿ ಮಗುವ ಮನ
ಬೆಳೆಸಲಿ ಹಸಿರು ಸಸಿಯ ವನ

ಗಿಡ ನೆಟ್ಟು ಮಾದರಿ ಆಗಿದೆ ಮಗುವು
ದೊರೆಯಲಿ ಎಲ್ಲರ ಸಹಕಾರವು
ನೆಟ್ಟ ಗಿಡಗಳು ಆಗಲಿ ಸಾವಿರವು
ಮಾನವನ ಬದಕಾಗಲಿ ನಂದನವು

ಅಪ್ಪ


ಅಮ್ಮ ಕೊಡುವಳು ಉಸಿರು
ಅಪ್ಪ ನೀಡುವ ಜೀವಕೆ ಹೆಸರು
ಅಪ್ಪ ಈ ಬದುಕಿನ ಆಳದ ಬೇರು
ಅಪ್ಪ ಮನದಿ ನೀನೆಂದೂ ಹಸಿರು

ಬಾಳಿನ ಸೂತ್ರದಾರನು ನೀನು
ಕನಸು ನನಸಾಗಿಸುವ ಶೂರನು
ಕೇಳಿದ್ದು ಕೊಡುವ ಜಾದೂಗಾರನು
ಶ್ರಮ ಜೀವಿಯು ಜಗದಿ ಅಪ್ಪನು

ಬೆವರು ಹರಿಸುವ ಕಟುಂಬಕ್ಕಾಗಿ
ಗದರುತಲೇ ಪ್ರೀತಿಸುವನು ತ್ಯಾಗಿ
ಕಷ್ಟ ಪಡುವ ಹೆಂಡತಿ ಮಕ್ಕಳಿಗಾಗಿ
ಕೊನೆವದೆಗೂ ದುಡಿವ ಕಾರ್ಮಿಕನಾಗಿ

ನಂಬಿಕೆಗೆ ಮತ್ತೊಂದು ಹೆಸರು ಅಪ್ಪ
ಭದ್ರತೆಗೆ ನಿನ್ನ ತೋಳು ಮಾತ್ರ ಅಪ್ಪ
ಮನದಲ್ಲೇ ಅತ್ತು ಪ್ರೀತಿಸುವ ಅಪ್ಪ
ಪದಗಳಿಲ್ಲ ನಿನ್ನ ಬಣ್ಣಿಸಲು ಅಪ್ಪ

ಅಪ್ಪ ಭವಿಷ್ಯದ ಭದ್ರ ಬುನಾದಿ
ತೋರಿಸುವನು ಬದುಕಿನ ಹಾದಿ
ಮೀರುವನು ಇವ ತ್ಯಾಗದ ಪರಿಧಿ
ಅಪ್ಪ ನಿನ್ನ ಪಾದವೆನಗೆ ದಿವ್ಯ ಸನ್ನಿಧಿ

ಸೌರವ್ಯೂಹ - ಸಹಕಾರ


ರವಿಯ ಸುತ್ತವ ಗ್ರಹಗಳು
ನಭೋಮಂಡಲದಿ ಇಹುದು
ಅದರಲಿ ಇಹುದು ಭುವಿಯು
ನಮ್ಮ ಆಶ್ರಯ ತಾಣವಿದು

ಬಂದೊದಗಿದೆ ಈ ಭುವಿಗೆ
ಸಂದಿಗ್ಧ ಪರಿಸ್ಥಿತಿ ದಿನಗಳು
ಸಾಂಕ್ರಾಮಿಕ ರೋಗದಿ
ಜನರು ನರಳುವ ಕ್ಷಣಗಳು

ಬಂದಿವೆ ಉಳಿದ ಗ್ರಹಗಳು
ಭೂವಿಯ ಒಂದಾಗಿ
ಹೇಳುತಿವೆ ಧೈರ್ಯವಾಗಿರು
ಹೆದರಬೇಡ ಎಂದು ಕೂಗಿ

ಜಗದಿ ಶಾಶ್ವತವಲ್ಲ ಯಾವುದು
ಎಲ್ಲವೂ ಭಗವಂತನ ಆಟ
ಎಲ್ಲರೊಂದಾಗಿ ಎದುರಿಸುವ
ಮುಂದಿದೆ ಸಂಭ್ರಮ ಕೂಟ

ಎಂದು ಆಶಿಸತಲಿವೆ ಉಳಿದ
ಎಂಟು ಸೌರವ್ಯೂಹದ ಗ್ರಹಗಳು
ಸಹಾಯ ಹಸ್ತವ ನೀಡುತಲಿ
ಭೂಮಿಯ ಜೊತೆಗಿವೆ ಅವುಗಳು

ವೇದಾವತಿ ಭಟ್ಟ
ಮುಂಬೈ




ಬಣ್ಣಗಳ ಸಂಗಮ



ಬಣ್ಣ ಎರಚುವ ಹಬ್ಬವಿದು ಹೋಳಿ
ಎಲ್ಲೆಲ್ಲೂ ಬಣ್ಣದ ಚಿತ್ತಾರದ ಓಕುಳಿ
ವರ್ಷಕ್ಕೊಮ್ಮೆ ಬರುವುದು ಮರಳಿ
ಬೆಳೆದಿದೆ ಬಾಂಧವ್ಯದ ಸರಪಳಿ

ಮನದ ಭಾವನೆಗಳ ಸಮಾಗಮ
ಇದು ಹಲವು ಬಣ್ಣಗಳ ಸಂಗಮ
ನೆನಪಿಸುತ ರಾಧೆ-ಶ್ಯಾಮರ ಪ್ರೇಮ
ಹೋಳಿ ಈ ಓಕುಳಿ ಹಬ್ಬದ ನಾಮ

ರಂಗು ರಂಗಿನ ರಂಗ ಪಂಚಮಿ
ಬಣ್ಣದಿ ತುಂಬಿ ಹೋಗಿದೆ ಭೂಮಿ
ಇದುವೇ ನವ ಭಾವಗಳ ನವಮಿ
ದಹಿಸಲಿ ಎಲ್ಲ ಕಷ್ಟಗಳ ಸುನಾಮಿ

ಮಾಡುವರು ಜೊತೆಗೆ ಕಾಮನ ದಹನ
ಋತುವಿನ ರಾಜ ವಸಂತನ ಆಗಮನ
ಬಣ್ಣದ ರಂಗಿನಲಿ ಧರೆಯಿದು ನಂದನ
ಜಾತಿ ಬೇಧವ ಮರೆತು ಎಲ್ಲರ ಮಿಲನ

ವೇದಾವತಿ ಭಟ್ಟ
ಮುಂಬೈ