ಸೋಮವಾರ, ಡಿಸೆಂಬರ್ 22, 2014

ಜೀವನ ಪಯಣ..

ಕರೆಯುತಿಹ ಕನಸುಗಳ
ಮರೆಯುತಿಹ ಮನಸುಗಳ
ಜೊತೆ ಓಡುತಿದೆ ಜೀವನ ಪಯಣ...

ನಾಳೆಗಳ ಭರವಸೆಯಲಿ
ನಿನ್ನೆಗಳ ನೆನಪಿನಲಿ
ನಡೆಯುತಿದೆ ಜೀವನ ಪಯಣ...

ಭಾವಗಳ ತೆರೆ ಮರೆಯಲಿ
ತಳಮಳದ ಅಲೆಯಲಿ
ತೆಲುತಿದೆ ಜೀವನ ಪಯಣ...

ಉಕ್ಕಿ ಬರುವ ಕಣ್ಣೀರ ಹನಿಯಲಿ
ಚಿಮ್ಮುವ ನಗೆ ಬುಗ್ಗೆಯಲಿ
ಸಾಗುತಿದೆ ಜೀವನ ಪಯಣ...

ಶುಕ್ರವಾರ, ಆಗಸ್ಟ್ 8, 2014

ಕ್ಷಣಗಣನೆ


         ಕೊನೆವರೆಗೂ ನಿನ್ನ ಜೊತೆಯಾಗಿರಲು..
ನನ್ನೆ ನಾ ಮರೆತು ನೀನಾಗಿರಲು..
ನಿನ್ನ ತೋಳಲ್ಲಿ ಬಂಧಿಯಾಗಿರಲು..
ಹೃದಯ ಸಿಂಹಾಸನದಲ್ಲಿ ನಿನ್ನ ಮೆರೆಸಲು..
ಹುಡುಗಾ...
ಕಾದಿರುವೆ ನಿನಗಾಗಿ..

ತವಕ ಪುಳಕಗಳಲಿ ಮೈಮರೆಸು..
ಸಿಹಿಮುತ್ತುಗಳ ಮಳೆಸುರಿಸು..
ನಿನ್ನೆದೆಯ ಗೂಡಲ್ಲಿ ಬೆಚ್ಚಗಿರಿಸು..
ನನಸಾಗಿಸು ನನ್ನೆಲ್ಲ ಕನಸು..
ಹುಡುಗಾ...
ನೀ ಬೇಗ ಆಗಮಿಸು..

ಹನಿ ಮಳೆ ಭುವಿಯನ್ನು ತಂಪಾಗಿಸಿದಂತೆ..
ಚಂದ್ರನ ಬೆಳದಿಂಗಳು ಕಡಲ ಆವರಿಸಿದಂತೆ..
ಹಸಿರೆಲೆಗೆ ಮಂಜಿನ ಹನಿ ಮುತ್ತಿಟ್ಟಂತೆ..
ಹೂವು-ದುಂಬಿ ಜೊತೆಯಾದಂತೆ..
ಹುಡುಗಾ...
ನೀ ನನ್ನ ಜೀವ-ಜೀವನದ ಜೊತೆಯಾಗು..



ಶುಕ್ರವಾರ, ಜುಲೈ 25, 2014

ಇನಿಯಾ,,


ಚುಮು ಚುಮು ಚಳಿಯಲಿ
ಸೂರ್ಯನ ಎಳೆಬಿಸಿಲ ಸ್ಪರ್ಶದಂತೆ
ಹಿತವೆನಿಸುವೆ ನೀನು..

ಸುಡುಬಿಸಿಲಿನಲ್ಲಿ ನಡೆವಾಗ ಆಸರೆಯಾಗುವ
ಹಸಿರು ಗಿಡದ ನೆರಳಂತೆ
ನನ್ನ ಬಾಳ ಹಸಿರು ನೀನು..

ಪ್ರತಿ ಹೆಜ್ಜೆಯ ಗೆಜ್ಜೆಯ ದನಿಯಲ್ಲಿ
ಬೆರೆತುಹೋದ
ಜೊತೆಗಾರ ನೀನು..

ನನ್ನ ಪ್ರತಿ ಕಣ್ಣೀರಿನ ಹನಿ
ನಸುನಗೆಯಲ್ಲೂ ಇಣುಕುವ
ಕಥೆಗಾರ ನೀನು..

ಉಸಿರಾಡುವ ಗಾಳಿಯಲ್ಲಿ ಬೆರೆತು
ನನ್ನ ಉಸಿರಾಗಿರುವ
ಜೀವದ ಜೀವ ನೀನು..

ತನುವಿಗೆ ತಂಪು ನೀಡುವ
ಮನಕೆ ಚೈತನ್ಯ ಕೊಡುವ
ತುಂತುರು ಮಳೆಹನಿ ನೀನು..

ಅಂದು - ಇಂದು

ಅವಳ ನಗುವಿಗೆ
ಸೋತು ಸೋತು
ಶರಣಾದೆ ಅಂದು..

ಅವಳ ಮಾತಿನ
ಮೋಡಿಗೆ
ಸೆರೆಯಾದೆ ಅಂದು..

ಅವಳ ಬಿಳಿ ಕೆನ್ನೆ,
ಕೆಂದುಟಿಯ ಕೆಂಪಿಗೆ
ಮರುಳಾದೆ  ಅಂದು..

ಅವಳ ಒಲವಿನಲಿ
ತೇಲಿ ಮೈಮರೆತು
ಮದುವೆಯಾದೆ ಅಂದು..

ಅವಳ ನಗುವಿನ
ಹಿಂದಿನ ಕಪಟ
ಅರಿವಾಯಿತು ಇಂದು..

ಪ್ರೀತಿಯ ಅರ್ಥ ತಿಳಿಯದ,
ಆಕರ್ಷಣೆಯ ಸೋಗಿನಲಿ
ಜೊತೆಯಾದ ಳೆಂದು ತಿಳಿಯಿತು ಇಂದು..

ನನ್ನ ಹೃದಯವನ್ನೇ
ಎಡಗಾಲಿನಲ್ಲಿ ಒದ್ದು ಹೋದಾಗ
ಅರಿತೆ ಮೋಸಗಾತಿ ಅವಳೆಂದು ..

ಭಾನುವಾರ, ಜೂನ್ 22, 2014

ಪ್ರಕೃತಿ




ಪ್ರಕೃತಿ ಮಾತೆ ಸಹಿಸುತಿಹಳು
ಎಲ್ಲ ಕಷ್ಟಕೋಟಲೆ..
ನಮ್ಮ ಬಾಳು ನರಕ ಸದೃಶ
ಅವಳು ಸಿಡಿದಳೆಂದರೆ..

ಉಸಿರು ಕೊಡುವ ಹಸಿರಿಗೆ
ಕೊಡಲಿ ಏಟು ಕೊಡುವರು..
ಜೀವಜಲಕೆ ವಿಷವ ಬೆರೆಸಿ
ಸಾಧನೆಯೆಂದು ಮೆರೆವರು..

ವಿನಾಶದ ಅಂಚಲ್ಲಿದೆ
ಪ್ರಾಣಿ-ಪಕ್ಷಿ ಸಂಕುಲ..
ಆಕ್ರೋಶದಿ ಕೂಗುತಿವೆ
ನಮದೂ ಅಲ್ಲವೇ ನೆಲ??

ಸಹನಾಮೂರ್ತಿ, ಕ್ಷಮಯಾಧರಿತ್ರಿ
ವಸುಂಧರೆ...
ವಿಷವನ್ನುಂಡು ಅಮೃತವನೇ
ನೀಡುತಿಹಳು ಸುಮ್ಮನೆ.. 

ಸಮೀಪಿಸುತಿದೆ ಕೇಡುಗಾಲ
ಮನುಜಕುಲಕೂ ಖಂಡಿತ..
ಇದನರಿತು ಸಂರಕ್ಷಿಸಿದರೆ ಪ್ರಕೃತಿಯ
ಸುಖದ ಕಾಲ ನಿಶ್ಚಿತ.

ಮಂಗಳವಾರ, ಏಪ್ರಿಲ್ 29, 2014

ಗೆಳೆಯಾ.....

ಎಂದೋ ಒಂದು ದಿನ ಆಕಸ್ಮಿಕ ಪರಿಚಯ
ಪರಿಚಯಕ್ಕಾಗಿ ಒಂದು ಮುಗುಳುನಗೆ
ಯಾಕೆ ನಗು ನನ್ನ ಹೃದಯದಲ್ಲಿ
ಸ್ಥಿರವಾಯಿತು ಗೆಳೆಯಾ.....?

ಶುರುವಾಯಿತು ಭಾವನೆಗಳ ವಿನಿಮಯ
ಹೀಗೆಯೇ ಕಳೆಯಿತು ಬಹುಸಮಯ
ಮೂಡಿತು ಮನದಲ್ಲಿ ನವಿರಾದ ಭಾವನೆಗಳು
ಕಾರಣವೇನು ಗೆಳೆಯಾ.....?

ನಾನು-ನೀನು ಸಮಾನಾಂತರ ರೇಖೆಗಳು ಎಂದೂ
ಜೀವನದಲ್ಲಿ ಸೇರಲಾರೆವು ಎಂದೆಂದೂ
ಇದನ್ನೆಲ್ಲ ಯೋಚಿಸಲೇ ಇಲ್ಲ ನಾವಿಬ್ಬರೂ ಅಂದೂ
ಏಕೆ ಹೀಗೆ ಗೆಳೆಯಾ.....?

ಗುರುವಾರ, ಏಪ್ರಿಲ್ 24, 2014

ನಮನ


ನನ್ನ ಜೀವನ ವಿಧಾತನೇ
ನಿನಗಿದೋ ನಮನ
ನಿನಗಾಗಿ ಬರೆದೆ ನನ್ನ
 ಪುಟ್ಟ ಕವನ
ನೀನಾಗಿದ್ದೆ ದಿಕ್ಕು ತಪ್ಪಿದ
ಬಾಳಿನ ನಾವಿಕ
ಈಗ ಏಕಾದೆ ನನಗೆ
ನೀ ಪ್ರಶ್ನಾರ್ಥಕ?
ಶಿಲೆಯಂತಿದ್ದ ನನ್ನ ಶಿಲ್ಪವಾಗಿಸಿದ
ಸಾಕಾರ ಮೂರ್ತಿ ನೀನು
ಇಂದು ನನ್ನ ಮನದಂಗಳದಿಂದ
ದೂರಾದ ವ್ಯಕ್ತಿ ನೀನು
ಬಹುವಿಶಾಲ ಜೀವನ
ಎಂಬ ಪಯಣ
ನಿನಗಿದೋ ಮತ್ತೊಮ್ಮೆ
ನನ್ನ ನಮನ..

ಶುಕ್ರವಾರ, ಮಾರ್ಚ್ 21, 2014

ಹನಿಗವನಗಳು



ಬಿಡುಗಡೆ…
ಅಮವಾಸ್ಯೆ ಚಂದ್ರನಿಗೂ ಉಂಟೂ
ಹುಣ್ಣಿಮೆಯೆಂಬ ಸಂಭ್ರಮದ ಬೆಳಕು
ಕತ್ತಲಾಗುತ್ತಲೇ ಮರೆಯಾಗುವ ಸೂರ್ಯನಿಗೂ ಉಂಟು
ಪ್ರತಿ ಮುಂಜಾನೆ ಹೊಸಹುಟ್ಟು…
ಭಾವಗಳ ಸೆರೆಯಲಿ
ಕೈದಿಯಾಗಿರುವ ಮನಸೇ
ನಿನಗೇಕೇ ಬಿಡುಗಡೆಯಿಲ್ಲ
ನಾಳೆಗಳ ಸಂಭ್ರಮಿಸಲು???

ಮರೆವು
ಓ ಮರೆವೇ ,,,,,,
ಮನದ ತುಂಬಾ ಹರಡಿ
ಕಾಡುತಿಹ ಕಹಿ ನೆನಪುಗಳ
ಕೊನೆಯಾಗಿಸಲು ವರವಾಗಿ ಬಾ....

ವರ್ಷಧಾರೆ,,,,
ಒಲವೆಂಬ ವರ್ಷಧಾರೆ
ಹಸಿರು ಚಿಗುರಿಸದೇ
ಮನಸ್ಸನ್ನೆಲ್ಲ ಕೆಸರು ಮಾಡಿ
ಹೋದಮೇಲೆ
ಬಿರುಮಳೆಗೆ ಸಿಲುಕಿ
ಬಣ್ಣ ಮಾಸಿದ
ಚಿತ್ರದಂತಾಯಿತು ಬದುಕು,,,

ಇನಿಯಾ,
ನೀ ನನ್ನ ಮರೆತು ದೂರಾದ ಮೇಲೆ
ನಿನ್ನ ನೆನಪುಗಳಿಗೆಲ್ಲ ಸುಲಭವಾಗಿ
ಸಮಾಧಿ ಕಟ್ಟಬೇಕೆಂದುಕೊಂಡೆ....
ಆಮೇಲೆ ತಿಳಿಯಿತು
ಅದು ಬರಿ ನಿನ್ನ ನೆನಪುಗಳಿಗೆ
ಕಟ್ಟಿದ ಸಮಾಧಿಯಲ್ಲ
ನನ್ನದೇ ಸಮಾಧಿಯೆಂದು.....

ಕಂಬನಿ
ಮೋಡ ಹಗುರಾಗಲು
ಸುರಿಸುವುದು ವರ್ಷಧಾರೆ…..
ಹೃದಯ ಹಗುರಾಗಲು
ಸುರಿಸುವುದು ಕಣ್ಣೀರಧಾರೆ….

ತ್ಯಾಗ
ಹೆಣ್ಣೇನಿನಗೂ ತ್ಯಾಗವೆಂಬ
ಪದಕ್ಕೂ ಎಂತಾ ನಂಟು.....!!
ತಾಯಿಯಾಗಿ ಕಂದನಿಗಾಗಿ
ಮಾಡುವೆ ತ್ಯಾಗ...
ಮಗಳಾಗಿ ತಂದೆಯ
ಪ್ರತಿಷ್ಹೆಗಾಗಿ ತ್ಯಾಗ...
ಸಹೋದರಿಯಾಗಿ ಸಹೋದರನ
ಅವಕಾಶಗಳಿಗಾಗಿ ತ್ಯಾಗ...
ಹೆಂಡತಿಯಾಗಿ ಗಂಡನ
ಸುಖಕ್ಕಾಗಿ ತ್ಯಾಗ...

ಮನಸೇ,,,,
ಮನ ಒಳಗೊಳಗೆ ಬಿಕ್ಕುತಿದೆ
ಕಾರಣ ಮಾತ್ರ ನಿಗೂಢ..
ವಿಷಾದದ ಕರಿನೆರಳು ಹಬ್ಬಿ
ಮನದ ಶಾಂತಿಯ
ಕೊನೆಗಾಣಿಸಿದೆ...

ಮನ ಒಮ್ಮೊಮ್ಮೆ ನಗುತ್ತದೆಕೂಡ
ನಗುವಿಗೆ ಕಾರಣವಿಲ್ಲ…
ಸಂತಸದ ಎಳೆ ಎಲ್ಲೋ
ಇಣುಕಿ ಮಾಯವಾಗುತ್ತಿರಬೇಕು....

ಮನಸೇ....,


ಭಾವನಾ ಲೋಕದಲಿ ಮೈಮರೆತು
ಹಕ್ಕಿಯಂತೆ ಹಾರದಿರು ಮನಸೇ,
ಭಾವನೆಗಳೆಲ್ಲ ಮಂಜಿನ ಮುಸುಕಿನಂತೆ ಕರಗಿ
ಉಳಿಯುವುದು ಬರೀ ಬಿಸಿಲು, ಹಿಂಬಾಲಿಸುವ ಕರಿನೆರಳು....

ಸೋನೆ ಮಳೆಯ ತಂಪಿಗೆ
ಹುಚ್ಚೆದ್ದು ಕುಣಿಯಬೇಡ ಮನಸೇ,
ಮಳೆಯ ಜೊತೆಗೆ ಬರುವುದು
ಆರ್ಭಟಿಸುವ ಸಿಡಿಲು, ಕೊಚ್ಚಿಹೋಗುವಂತ ಭೀಕರ ಪ್ರವಾಹ....

ಪ್ರೀತಿಯೆಂಬ ಮಾಯೆಯನ್ನು
ನೀ ನಂಬಬೇಡ ಮನಸೇ,
ಕೊನೆಗೆ ಉಳಿಯುವುದು
ಬರೀ ನೋವು, ಕಣ್ಣೀರು, ವಿಷದಂತಹ ಕಹಿ ನೆನಪುಗಳು....