ಶುಕ್ರವಾರ, ಜನವರಿ 29, 2016

ವೇದನೆ

ಮಾಗಿಯ ಚಳಿಗಾಗಿ ಕಾಯುವ ಭುವಿಯಂತೆ..
ಮಂಜಿನ ಹನಿಯ ಸ್ಪರ್ಶಕಾಗಿ ಕಾದ ಇಳೆಯಂತೆ..
ಬಿಸಿಲ ಬಿಸಿ ಅಪ್ಪುಗೆಗೆ ಕಾದ ವಸುಂಧರೆಯಂತೆ..
ಮುಂಗಾರು ಮಳೆಗಾಗಿ ವಿರಹಿಸಿ ಕಾಯುವ ಧರೆಯಂತೆ..
ನಿನ್ನ ಆಗಮನಕಾಗಿ ಕಾದಿರುವೆ ಓ ಗೆಳೆಯಾ..

ಮನದ ಭಾವನೆಯ ಹೊತ್ತ ಸಂದೇಶ ರವಾನೆ..
ಕಣ್ಣು ಮುಚ್ಚಿದರೆ ಕಾಡುವ ನಿನ್ನ ಕನಸುಗಳು..
ಕಣ್ಣು ತೆರೆದರೂ ಬರಿ ನಿನ್ನ ಹಗಲುಕನಸುಗಳು..
ಮನದಿ ನಿನ್ನ ನೆನಪಿನಲೆಯ ತೊಯ್ದಾಟ..
ಇದೆಲ್ಲವೂ ಸಾಕಾಗಿದೆ ಓ ಗೆಳೆಯಾ..

ಸಾಕಾಗಿದೆ ಈ ಸಂಘರ್ಷ, ನೀಡು ನಿನ್ನ ಹಿತ ಸ್ಪರ್ಶ..
ಕ್ಷಣ ಕ್ಷಣವೂ ಬೇಕಾಗಿದೆ ನಿನ್ನ ಸಾಂಗತ್ಯ..
ಸವಿಯುವಾಸೆ ಬಾಹುಬಂಧನದ ಲಾಲಿತ್ಯ..
ಕೊನೆಗೊಳಿಸು ಈ ಕಹಿ ವಿರಹ ವೇದನೆಯ..
ಕಾದಿರುವೆ ನಿನಗಾಗಿ ಓ ಗೆಳೆಯಾ..

ನೀನಿಲ್ಲದೇ ಬಣ್ಣವಿಲ್ಲದ ಚಿತ್ರ ನಾನು..
ಸುವಾಸನೆ ಬೀರದ ಹೂವು ನಾನು..
ನಾದ ಹೊಮ್ಮದ ಬರಿಯ ವೀಣೆ ನಾನು..
ಹಸಿರಿಲ್ಲದ ಒಣಗಿದ ಭುವಿ ನಾನು..
ಚೈತನ್ಯ ತುಂಬಲು ಬಾ ಗೆಳೆಯಾ..


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ