ಬುಧವಾರ, ಜುಲೈ 1, 2020

ಚುಟುಕು

ತನು
ತನುವ ಸೌಂದರ್ಯಕೆ ಸೋಲದಿರು
ಹೇ ಮರುಳು ಮನುಜ
ನಶಿಸುವುದು ಕಾಲ ಕಳೆದಂತೆ
ಇದು ಬಹಳ ಸಹಜ...

ಮನ
ಹೆಂಡತಿಯ ಮಾತ ಕೇಳಿ ಒಬ್ಬ
ತಾಯಿಗೆ ಕಟ್ಟಿದ ಪಟ್ಟ ಹುಚ್ಚಿ
ಮನದ ಮಾತ ಕೇಳದೇ ಮಾಡಿದ
ಅಪರಾಧ ಕೊನೆತನಕ ಕಾಡಿತ್ತು ಚುಚ್ಚಿ...

ಧನ
ಮಾಡಿದ ದಾನ ಧರ್ಮ
ಬರುವುದು ಕೊನೆಯಲಿ
ಕೂಡಿಟ್ಟ ಧನ ಇರುವುದು
ಕೇವಲ ಪೆಟ್ಟಿಗೆಯಲಿ...


*ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ(ರಿ) -ಮಹಾರಾಷ್ಟ್ರ*🇮🇳 🇮🇳🇮🇳🇮🇳🇮🇳🇮🇳🇮🇳🇮🇳

ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ (ರಿ )-ಮಹಾರಾಷ್ಟ್ರ ಇವರು *ಕುಣಿಗಲ್ ತಾ. ಲೇಖಕರ ಬಳಗ ಹಾಗೂ ತನ್ಮಯ್ ಗ್ರೂಪ್ಸ್ ನ ಸಹಯೋಗದಲ್ಲಿ ದಿ :20.06.2020ರಂದು ಅಂತರ್ ರಾಜ್ಯ ಮಟ್ಟದ ವಾಟ್ಸಪ್ *ಚುಟುಕು ಸ್ಪರ್ಧೆ* ಯಲ್ಲಿ "ಅತ್ಯುತ್ತಮ" ಸ್ಥಾನ ದೊರೆತು "ಅನರ್ಘ್ಯ ಚುಟುಕು ರತ್ನ" ಪ್ರಶಸ್ತಿ ಗೆ ಪಾತ್ರವಾಗಿದೆ.

ಕೋರಿಕೆ

ಪಟಪಟನೇ ಸುರಿವ ಮಳೆಯೇ
ತೊಳೆ ನೀ ಭುವಿಯ ಕೊಳೆಯ
ಭರಭರನೇ ಬೀಸುವ ಗಾಳಿಯೇ
ಹಾರಿಸು ನೀ ಎಲ್ಲ ಸಂಕಷ್ಟವ

ಗುಡುಗುಡು ಗುಡುವ ಗುಡುಗೇ
ಹೆದರಿ ಓಡಿಸು ವಿಷ ಜೀವಾಣುವ
ಪಕಪಕನೇ ಹೊಳೆವ ಕೋಲ್ಮಿಂಚೇ
ಓಡಿಸು ಜಗದ ಅಂಧಕಾರವ

ದಡಬಡನೇ ಬಡಿವ ಬರಸಿಡಿಲೇ
ಚೂರುಚೂರಾಗಿಸು ಅಹಂಕಾರ
ತಪ್ಪಿನ ಅರಿವು ಮಾಡು ಪ್ರಕೃತಿಯೇ
ತಾನೇ ಮೇಲೆಂದು ಮೆರೆವ ಮನುಜರ

ಓ ದೇವನೇ ಸಾಕು ಮಾಡು ಈ ನರಕ
ಕೊನೆಯಾಗಿಸು ಶೀತಲ ಸಮರ
ಉಳಿಸು ನೀ ಎಲ್ಲ ಮುಗ್ಧರ ಜೀವ
ಕೊನೆಯಾಗಿಸು ಈ ಮರಣ ಮೃದಂಗ

ಪಂಚಮ ವೇದಾ...

ಬಂಧಿ

ಕಾದು ಕುಳಿತಿಹೆ ನಾನು
ಆ ಶಬರಿಯಂತೆ
ಮನಕೆ ಮುದ ನೀಡಲು
ಬರುವೆ ನೀನೆಂದೂ...??

ಕಳೆದ ಆ ಮಧುಮಧುರ
ನೆನಪುಗಳಿಗೆ
ಮರು ಜೀವ ನೀಡುವ
ಕ್ಷಣವು ಬರುವುದೆಂದೂ...??

ಪಂಜರದ ಗಿಣಿಯಂತೆ
ಬಂಧಿ ನಾನಿಲ್ಲಿ
ಕಾಡುತಿಹ ಭಯವು
ಕೊನೆಯಾಗುವುದೆಂದೂ...??

ಪಾಂಡವರ ಬೇಗುದಿಗೂ
ಮಿಗಿಲಾದ ಈ
ಅಜ್ಞಾತವಾಸ ನನಗೆ
ಮುಗಿವ ಕ್ಷಣವೆಂದೂ...??

ಪರಿವರ್ತನೆ

ಅಡಗಿ ಕುಳಿತಿಹೆವು ನಾವು
ಸೂಕ್ಷ್ಮಾಣು ಜೀವಿಗೆ
ಹೆದರಿ ಕುಳಿತಿಹೆವು ನಾವು...

ಸಂಬಂಧಗಳ ಮರೆತು
ಬಾಂಧವ್ಯಗಳ ಮರೆತು
ಹೆದರಿ ಕುಳಿತಿಹೆವು ನಾವು...

ಬೀದಿ ಬೀದಿಯ ಸುತ್ತದೇ
ಮಾಲ್ ಶಾಪಿಂಗ್ ಇಲ್ಲದೇ
ಹೆದರಿ ಕುಳಿತಿಹೆವು ನಾವು...

ಕಾಯಿಪಲ್ಲೆ, ಹಣ್ಣು ತರಕಾರಿ
ತರಲು ಹೋಗುತ್ತಿಲ್ಲ ಸವಾರಿ
ಹೆದರಿ ಕುಳಿತಿಹೆವು ನಾವು...

ಶವ ಸಂಸ್ಕಾರಕೂ ಹೆದರಿ
ಮಾನವೀಯತೆಯ ತೂರಿ
ಹೆದರಿ ಕುಳಿತಿಹೆವು ನಾವು...

ಓಡುತಿರುವ ಜಗವು ನಿಂತು
ಮುಂದಿನ ಹಾದಿ ಮರೆತು
ಹೆದರಿ ಕುಳಿತಿಹೆವು ನಾವು...

ತಮ್ಮ ಮನೆಗೆ ತಾವೇ ಬಂದು
ನಿಂದನೆಯ ಕೇಳಿ ನೊಂದು
ಹೆದರಿ ಕುಳಿತಿಹೆವು ನಾವು...

ಪಂಚಮ ವೇದಾ....


ಆಹ್ವಾನ

ಹೆತ್ತ ತಂದೆ-ತಾಯಿಯರ
ಬಂಧನವ ಬಿಡಿಸಿ
ದುರುಳನಾದ ಕಂಸನ
ಸಂಹರಿಸಿದೆ ನೀ ಮುರಳಿ...

ನಿನಗೆ ಮೃತ್ಯುವಾಗಲು
ಬಂದ ರಾಕ್ಷಸಿ ಪೂತನಿಯ
ಮಗುವಾಗಿರುವಾಗಲೇ
ಕೊಂದೆ ನೀ ಶ್ಯಾಮ...

ಕೌರವ ಸಭೆಯಲಿ ದ್ರೌಪದಿಯ
ವಸ್ತ್ರಾಪಹರಣ ತಡೆದು
ಮಾನ ಉಳಿಸಿದ
ಮಹಾನುಭಾವ ನೀ ಕೃಷ್ಣ...

ಧರ್ಮ ರಕ್ಷಣೆಗಾಗಿ ಕರ್ಣನ
ಬಾಣದಿಂದ ಬಹು ಸೂಕ್ಷ್ಮದಿ
ಅರ್ಜುನನ ಪ್ರಾಣವನು
ಉಳಿಸಿದೆ ನೀ ಮಾಧವ..

ಈ ಕಲಿಯುಗದಿ ಮತ್ತೆ
ಅವತರಿಸಿ ಕಾಣದ ವಿಷಾಣುವಿನ
ಅಬ್ಬರವ ನಿಲ್ಲಿಸಿ ಮುಗ್ಧ ಜೀವಗಳ
ಉಳಿಸು ದುಷ್ಟ ಸಂಹಾರಿ ಮೋಹನ..