ಮಂಗಳವಾರ, ಜನವರಿ 26, 2021

ಸಂವಿಧಾನ

ಜನರಿಂದ ಜನರಿಗಾಗಿ ನಮ್ಮ ಸಂವಿಧಾನ
ಒಳ್ಳೆಯ ನ್ಯಾಯ ನೀತಿಗಿದುವೇ ಅಭಿದಾನ
ಜನವರಿ ಇಪ್ಪತ್ತಾರರಂದು ಇದರ ಜನನ
ಅಂಬೇಡ್ಕರರಿಂದ ಇದು ಆಗಿದೆ ಸಂರಚನ

ಮೂಲಭೂತ ಹಕ್ಕು ಸ್ವಾತಂತ್ರ್ಯದ ಸಂಕಲನ
ಜಗತ್ತಿನ ಎಲ್ಲೆಡೆ ದೊರಕಿದೆ ಇದಕೆ ಸಮ್ಮಾನ
ಸಂವಿಧಾನವಾಗಿದೆ ಮೌಲ್ಯಗಳ ಸಂಚಲನ
ಪರಿಹಾರವು ಇದರಿಂದ ಎಲ್ಲ ಅನುಮಾನ

ಸ್ವಾತಂತ್ರ್ಯ ಸಮಾನತೆಯ ಹಕ್ಕುಗಳ ಸಾಲು
ಸಾರಿತು ಇದು ರಾಷ್ಟ್ರವು ಎಲ್ಲಕ್ಕಿಂತ ಮೇಲು
ಮಾಡಿತು ಸರ್ಕಾರದ ಕಾರ್ಯಗಳ ಪಾಲು
ಚಿಮ್ಮಿಸಿದೆ ಮಾನವೀಯ ಮೌಲ್ಯದ ಹೊನಲು

ಒತ್ತು ನೀಡಿತು ವನ್ಯ ಜೀವಿಗಳ ಸಂರಕ್ಷಣೆಗೆ
ಅಡಿಪಾಯವಿದು ವೈಜ್ಞಾನಿಕ ಮನೋಭಾವನೆಗೆ
ರಾಷ್ಟ್ರಗೀತೆ, ಧ್ವಜದ ಗೌರವದ ಮೆರವಣಿಗೆ
ನಮ್ಮ ಸಂವಿಧಾನವ ಗೌರವಿಸುವ ಕೊನೆವರೆಗೆ

ಇದುವು ದೊಡ್ಡದಾದ ಲಿಖಿತ ಸಂವಿಧಾನವು
ಜಾತ್ಯಾತೀತ ಆಗಿಹುದು ಬಹಳ ಪ್ರಧಾನವು
ಸಂವಿಧಾನ ಗೌರವಿಸುವುದು ನಮ್ಮ ಕರ್ತವ್ಯವು
ದೇಶದ ಆತ್ಮ ಮತ್ತು ಹೃದಯ ಈ ಸಂವಿಧಾನವು

ಭಾನುವಾರ, ಜನವರಿ 24, 2021

ಕವಿತೆ ಕೃಷ್ಣ


ಕಲ್ಪವೃಕ್ಷ ಜಿಲ್ಲೆ ತುಮಕೂರು ಇವರ ತವರು
ಕೆಂಚಯ್ಯ-ಸಂಜೀವಮ್ಮನ ಪುತ್ರರು ಇವರು
ಶುಕ್ಲ ಪಕ್ಷದ ಚೌತಿಯಂದು ಜನಿಸಿದರು
ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ಇವರು

ನನ್ನೂರು ಕ್ಯಾತಸಂದ್ರದಿ ಬಿತ್ತರ ಊರಭಿಮಾನ
ರಚಿಸಿದರು ಇವರು ಹಲವಾರು ಕವನ ಸಂಕಲನ
ಅರಸಿ ಬಂದವು ಇವರನು ಪ್ರಶಸ್ತಿ ಸನ್ಮಾನ
ಸಾಹಿತ್ಯ ಸೇವೆಗೆ ಹೆಸರು ಕವಿತಾ ಪ್ರಕಾಶನ

ಅನೇಕ ಕೃತಿಗಳಿಗೆ ಮುನ್ನುಡಿಯ ಬರೆದರು
ನಾಟಕ ಲೋಕದಲಿ ಪ್ರಸಿದ್ಧ ಇವರ ಹೆಸರು
ಜೀವನ ಚರಿತ್ರೆಗಳ ರಚನಾಕಾರರು
ಇವರೊಬ್ಬ ಹೆಸರಾಂತ ಉಪನ್ಯಾಸಕಾರು

ಮಕ್ಕಳ ಸಾಹಿತ್ಯ ಲೋಕದಲೂ ಕೈಯಾಡಿಸಿದರು
ಸಂಶೋಧನಾ ಕೃತಿಗಳ ರಚಿಸಿದ ಕರ್ತೃ ಇವರು
ಕನ್ನಡ ರತ್ನ, ಚುಂಚಶ್ರೀ ಪ್ರಶಸ್ತಿ ಪುರಸ್ಕೃತರು
ಜನಮನದಿ ಗುರುಗಳೆಂದು ಪ್ರಸಿದ್ಧರಾದರು

ಕ್ಷಮಯಾಧರಿತ್ರಿ

 ಕ್ಷಮಯಾಧರಿತ್ರಿ*

ಹೆಣ್ಣೆಂದರೆ ಭೂಮಿಯ ತೂಕದವಳು
ಸಹನಾಮಯಿ, ಕ್ಷಮಯಾಧರಿತ್ರಿ ಅವಳು
ನವಮಾಸ ಗರ್ಭದಲಿ ಕಂದನ ಹೊರವಳು
ಜೀವವ ಪಣಕಿಟ್ಟು ಜೀವವ ಸೃಷ್ಟಿಸುವಳು

ಮಗಳಾಗಿ ಆಗುವಳು ಮನೆಯ ನಂದಾದೀಪ
ಸಹೋದರಿಯಾಗಿ ವಾತ್ಸಲ್ಯದ ಪ್ರತಿರೂಪ
ಸಹಿಸಿವಳು ಕಷ್ಟಗಳ ಪಡುವಳು ಪರಿತಾಪ
ತನ್ನೆಲ್ಲ ಆಸೆಗಳನು ತ್ಯಜಿಸುವಳು ಪಾಪ

ಹುಟ್ಟಿದ ಮನೆಯ ಬಿಟ್ಟು ಕೊಟ್ಟ ಮನೆ ಸೇರುವಳು
ತಂದೆ-ತಾಯಿ, ಒಡಹುಟ್ಟುಗಳ ತೊರೆಯುವಳು
ಸೇರಿದ ಮನೆಯಲಿ ಎಲ್ಲರಿಗಾಗಿ ದುಡಿಯುವಳು
ತನ್ನ ಸುಖವನೇ ಕೊನೆಯಲಿ ಮರೆಯುವಳು

ಓ ಹೆಣ್ಣೇ.. ನಿನಗೂ ಇದೆ ಒಂದು ಹೊಸ ಜೀವನ
ಎಲ್ಲ ಕ್ಷೇತ್ರದಲೂ ನಿನಗೂ ಇದೆ ಒಳ್ಳೆಯ ಸಮ್ಮಾನ
ನೀನೂ ಆಗಿರುವೆ ಪುರುಷನಿಗೆ ಸರಿ ಸಮಾನ
ಆಗಲಿ ನಿನ್ನ ಭಾವನೆಗಳ ಅನಾವರಣ

ಹೊಸ ವರ್ಷ

ಹೊಸ ಮನ್ವಂತರ

ಮುಗಿಯಲಿ ಕಹಿಯ ಈ ವರುಷ
ಬರಲಿ ಭರವಸೆಯ ಹೊಸ ವರುಷ
ತೊರೆಯುವ ಎಲ್ಲ ದ್ವೇಷ-ರೋಷ
ತುಂಬಲಿ ಎಲ್ಲರ ಮನದಿ ಸಂತೋಷ

ಸ್ವಾಗತಿಸುವ ಹೊಸ ಮನ್ವಂತರ
ಆಗಿರಲಿ ಇದುವು ಎಂದೂ ಸುಂದರ
ಶಾಂತಿಯ ನೆಮ್ಮದಿಯ ಹಂದರ
ಮೂಡಲಿ ಹೊಸ ಬೆಳಕಿನ ಚಂದಿರ

ಒಂದಾಗಿ ನಡೆವ ಪ್ರಗತಿಯೆಡೆಗೆ
ನೀಡುವ ಸಹಬಾಳ್ವೆಯ ಕೊಡುಗೆ
ಮಾನವೀಯ ಮೌಲ್ಯಗಳ ಜೊತೆಗೆ
ಇರಲಿ ದೈವೀ ಕೃತಿಯು ನಮಗೆ

ಕೊನೆಯಾಗಲಿ ನಮ್ಮೆಲ್ಲ ಸಂಕಷ್ಟ
ಜೀವಾಣುವಿನ ಅಂತ್ಯವಾಗಲಿ ಸ್ಪಷ್ಟ
ಒಲಿದು ಬರಲಿ ಜಗಕೆ ಅದೃಷ್ಟ
ಲಾಭವಾಗಿ ಬರಲಿ ಆದ ಎಲ್ಲ ನಷ್ಟ

ಹೊಸ ಮನ್ವಂತರ

ಬೇಗ ಕಳೆಯಲಿ ಕಹಿಯ ಈ ವರುಷ
ಬರಲಿ ಭರವಸೆಯ ಹೊಸ ವರುಷ
ತರಲಿ ಹೊಸ ಜೀವನದ ಹೊಸ ಹರುಷ
ತೊಳೆಯಲಿ ಎಲ್ಲ ಹಳೆಯ ಕೊಳೆ-ಕಲುಷ

ಕೊನೆಯಾಗಲಿ ಹಬ್ಬಿದ ರೋಗದ ಭೀತಿ
ಜಾರಿಯಾಗಲಿ ಎಲ್ಲರಿಗೂ ಒಂದೇ ನೀತಿ
ಆಗಲಿ ನಿರಂತರವೂ ದೇಶದ ಪ್ರಗತಿ
ಓ ದೇವ ಮನುಜರ ಮೇಲೆ ತೋರು ಪ್ರೀತಿ

ಹಳೆ ಬೇರಲಿ ಹೊಸ ತಳಿರು ಚಿಗುರಲಿ
ಹೊಸ ಮನ್ವಂತರಕೆ ನಾಂದಿಯಾಗಲಿ
ಜೀವನದಲಿ ಎಂದಿಗೂ ಶಾಂತಿ ನೆಲೆಸಲಿ
ಕಷ್ಟ-ದುಃಖ ದ್ವೇಷ-ರೋಷ ಕೊನೆಯಾಗಲಿ

ಹೊಸ ಪಥದಿ ಸಂಚರಿಸುವ ರವಿಯ ಕಿರಣ
ನೀಡಿದೆ ಹೊಸ ಬೆಳಕಿನ ಶುಭದ ಸಂಕ್ರಮಣ
ಭುವಿಯ ತುಂಬಾ ಚೈತನ್ಯದ ಅನಾವರಣ
ನವ ಉಲ್ಲಾಸವು ತುಂಬಲಿ ಪ್ರತಿ ಕಣ ಕಣ

ಜೀವನವಾಗಲಿ ಎಂದೆಂದಿಗೂ ಸಿಹಿ ಹೂರಣ
ಕಟ್ಟುವಂತಾಗಲಿ ಸಂಭ್ರಮದಿ ಹಸಿರು ತೋರಣ
ಇರಲಿ ಕಾಣದ ಕೈಯ ಅಭಯ ಹಸ್ತದ ಪ್ರೇರಣ
ನಾಂದಿಯಾಗಲಿ ಇಂದೇ ಗೆಲುವಿನ ಚಾರಣ

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

ಗಣರಾಜ್ಯೋತ್ಸವದ ಸಂಭ್ರಮವು
ತಾಯಿ ಭಾರತಿಯೇ ನಿನಗೆ
ಸಂವಿಧಾನ ಜಾರಿಯಾದ ದಿನವು
ಇದುವೇ ನಿನಗೆ ಶುಭ ಗಳಿಗೆ

ಸಮವಸ್ತ್ರ ಧರಿಸಿ ರಾಷ್ಟ್ರಗೀತೆ
ಹಾಡಿದ ಶಾಲಾ ದಿನದ ನೆನಪು
ಮನದಿ ಇದೆ ಗಣರಾಜ್ಯೋತ್ಸವ
ಪ್ರಭಾತ ಪೇರಿಯ ಹೊಳಪು

ಇಪ್ಪತ್ತಾರು ಜನವರಿಯಂದು
ಆಚರಿಸುವೆವು ಗಣರಾಜ್ಯೋತ್ಸವ
ಶಿಸ್ತಿನಿಂದ ಮರವಣಿಗೆ ಮಾಡುತ
ಘೋಷಣೆಯನು ಕೂಗುವ

ಅಂಬೇಡ್ಕರರು ರಚಿಸಿದರು ದೇಶಕ್ಕೆ
ನೀತಿ-ನಿಯಮಗಳ ಸಂವಿಧಾನ
ದೇಶದ ಐಕ್ಯತೆ, ಸಮಗ್ರತೆಗಳಿಗೆ
ಇದುವೇ ಆಗಿಹುದು ಅಭಿದಾನ

ರಾಷ್ಟ್ರ ರಾಜಧಾನಿ ದೆಹಲಿಯಲಿ
ನಡೆವುದು ಸಿಪಾಯಿಗಳ ಮೆರವಣಿಗೆ
ಪ್ರಶಸ್ತಿ-ಪುರಸ್ಕಾರಗಳ ನೀಡುವರು
ಅಂದು ಸಾಧನೆಗೈದಂತ ವೀರರಿಗೆ

ವೇದಾವತಿ ಭಟ್ಟ
ಮುಂಬೈ 

ಶುಕ್ರವಾರ, ಜನವರಿ 22, 2021

ಶೋಷಣೆ


ಹೆಣ್ಣೇ ನಿನಗೆ ಮಾತ್ರ ಏಕೇ
ಕಟ್ಟುಕಟ್ಟಳೆ ನಿಯಮ ಪಾಲನೆ?
ಪುರುಷನಿಗೂ ಇರಲಿ ಸ್ವಲ್ಪ
ಇದರ ಬಗ್ಗೆ ಯೋಚನೆ..

ಸಂಪ್ರದಾಯದ ಹೆಸರಿನಲಿ
ನಡೆಯುವುದು ಹೆಣ್ಣಿನ ಶೋಷಣೆ
ಕಂದಾಚಾರಗಳಿಂದ ದೊರೆಯುವುದು
ಪುರುಷರ ದೌರ್ಜನ್ಯಕ್ಕೆ ಪೋಷಣೆ.

ಕರಿಮಣಿ, ಕಾಲುಂಗುರಗಳೇ 
ಹೆಣ್ಣಿಗೆ ಬಿಡಿಸಲಾರದ ಬಂಧನ
ಅವಳ ಬವಣೆಯ ವಿಧವು
ಅನುದಿನವೂ ನೂತನ.

ಹೆಣ್ಣು ಹುಟ್ಟಿದರೂ, ಬೆಳೆ 
ಕಡಿಮೆಯಾದರೂ ಹಣ್ಣು ಕಾರಣ
ಏನೇ ಕೆಡುಕಾದರೂ ಹೇಳುವರು
ಅದಕ್ಕೆ ಕಾರಣ ಅವಳ ಕೆಟ್ಟ ಕಾಲ್ಗುಣ.

ಮಹಿಳೆ ಪುರುಷನ ಸಮಾನ
ಇದು ಕೇವಲ ಪ್ರಚಾರ
ಹೆಣ್ಣಿನಿಂದಲೇ ಹೆಣ್ಣಿನ ಶೋಷಣೆ
ಇದು ಪ್ರಸ್ತುತ ವಿಚಾರ.

ಮಹಿಳೆಯರೆಲ್ಲ ಒಂದಾಗಿ ಸೇರಿ
ಶೋಷಣೆ, ದೌರ್ಜನ್ಯವ ಮೀರಿ
ಹೊಂದಬೇಕು ಪುರುಷ ಪ್ರಧಾನ
ವ್ಯವಸ್ಥೆಯ ಸಮಾಧಿಯ ಗುರಿ



ಮಂಗಳವಾರ, ಜನವರಿ 19, 2021

ಸುಗ್ಗಿ

ಸವಿಯ ಸುಗ್ಗಿಯ ಸಿಹಿ
ಸಂಭ್ರಮದ ಸಮಯದಿ
ಹಿರಿ ಹಿರಿ ಹಿಗ್ಗನು ನೋಡು
ಅನ್ನದಾತನ ಮೊಗದಿ

ತುಂಬಿದ ತೆನೆಗಳನು
ಸರಸರನೆ ಕೊಯ್ಯುತ
ಸುಗ್ಗಿಯ ಹಾಡನು
ಮುದದಲಿ ಹಾಡುತ

ಭೂದೇವಿಯ ಪೂಜೆಯ
ಭಕ್ತಿಯಿಂದಲಿ ಗೈಯುತ
ಸಿಹಿಯಾದ ಹುಗ್ಗಿಯನು
ಎಲ್ಲರೂ ಸವಿಯುತ

ರೈತನ ಬದುಕಿನಲಿ ಈಗ
ಹಬ್ಬದ ಸಂಭ್ರಮ ಸಡಗರ
ಮನೆಯು ಆಗಿಹುದು
ಸಿರಿ ಧಾನ್ಯಗಳ ಆಗರ

ಮರಕ ರಾಶಿಯಲಿ ಕಿರಣ
ಬೀರುತ ರವಿಯ ಉದಯ
ಎಳ್ಳು ಬೆಲ್ಲವ ಹಂಚುವ
ಸುಗ್ಗಿ, ಸಂಕ್ರಮಣದ ಸಮಯ

ಸೋಮವಾರ, ಜನವರಿ 18, 2021

ಚಂದ್ರ ವದನೆ

ಚೆಲುವೆಯ ಮೊಗದಲಿ ಶಶಿಯ ಕಂಡು
ಮೂಡಿದೆ ಹಲವು ಸುಂದರ ಭಾವನೆ
ತುಂಬಿದ ಬಿಂದಿಗೆಯ ಪಕ್ಕದಲಿ ಇಟ್ಟು
ಇನಿಯನ ನೆನಪಲಿ ಕುಳಿತಹಳು ಸುಮ್ಮನೆ

ಇನಿಯನ ನೆನೆಯುತ ಮೈಯ ಮರೆತು
ನಾಚಿ ನೀರಾದಳು ಮಾನಿನಿ ಮೆಲ್ಲನೆ
ತಂಗಾಳಿಯ ಹಿತವಾಗಿಹ ಸ್ಪರ್ಶಕೆ
ಮನದಿ ಮೂಡಿತು ಹಲವು ಕಾಮನೆ

ಹೊಂಬಣ್ಣದ ಮೈಯ ತುಂಬಿದ ಗಲ್ಲದ
ಅಂಗನೆಯ ಚೆಲುವಿಗೆ ಶಶಿ ಸೋತನೇ?
ವರ್ಣಿಸಲು ಸೌಂದರ್ಯ ಇಲ್ಲ ಪದವು
ಹೊಳೆಯುವ ಕಣ್ಣುಗಳ ಚಂದ್ರ ವದನೆ

ರಸಮಯ ಭಾವಗಳು ಮೂಡಿರಲು
ಸುಂದರವು ಕವಿಯ ಮನದ ಕಲ್ಪನೆ
ಪ್ರಕೃತಿ ರಮ್ಯತೆಯಲಿ ತನ್ನನೇ ತಾನು
ಮರೆತು ಕುಳಿತಿಹಳು ಚಿರ ಯೌವ್ವನೆ