ಸೋಮವಾರ, ಜನವರಿ 18, 2021

ಚಂದ್ರ ವದನೆ

ಚೆಲುವೆಯ ಮೊಗದಲಿ ಶಶಿಯ ಕಂಡು
ಮೂಡಿದೆ ಹಲವು ಸುಂದರ ಭಾವನೆ
ತುಂಬಿದ ಬಿಂದಿಗೆಯ ಪಕ್ಕದಲಿ ಇಟ್ಟು
ಇನಿಯನ ನೆನಪಲಿ ಕುಳಿತಹಳು ಸುಮ್ಮನೆ

ಇನಿಯನ ನೆನೆಯುತ ಮೈಯ ಮರೆತು
ನಾಚಿ ನೀರಾದಳು ಮಾನಿನಿ ಮೆಲ್ಲನೆ
ತಂಗಾಳಿಯ ಹಿತವಾಗಿಹ ಸ್ಪರ್ಶಕೆ
ಮನದಿ ಮೂಡಿತು ಹಲವು ಕಾಮನೆ

ಹೊಂಬಣ್ಣದ ಮೈಯ ತುಂಬಿದ ಗಲ್ಲದ
ಅಂಗನೆಯ ಚೆಲುವಿಗೆ ಶಶಿ ಸೋತನೇ?
ವರ್ಣಿಸಲು ಸೌಂದರ್ಯ ಇಲ್ಲ ಪದವು
ಹೊಳೆಯುವ ಕಣ್ಣುಗಳ ಚಂದ್ರ ವದನೆ

ರಸಮಯ ಭಾವಗಳು ಮೂಡಿರಲು
ಸುಂದರವು ಕವಿಯ ಮನದ ಕಲ್ಪನೆ
ಪ್ರಕೃತಿ ರಮ್ಯತೆಯಲಿ ತನ್ನನೇ ತಾನು
ಮರೆತು ಕುಳಿತಿಹಳು ಚಿರ ಯೌವ್ವನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ