ಶನಿವಾರ, ಮೇ 22, 2021

ಜೀವನ ಪಯಣ



ಕರೆಯುತಿಹ ಕನಸುಗಳ
ಮರೆಯುತಿಹ ಮನಸುಗಳ
ಜೊತೆ ಓಡುತಿದೆ ಜೀವನ ಪಯಣ...

ನಾಳೆಗಳ ಭರವಸೆಯಲಿ
ನಿನ್ನೆಗಳ ನೆನಪಿನಲಿ
ನಡೆಯುತಿದೆ ಜೀವನ ಪಯಣ...

ಭಾವಗಳ ತೆರೆ ಮರೆಯಲಿ
ತಳಮಳದ ಅಲೆಯಲಿ
ತೇಲುತಿದೆ ಜೀವನ ಪಯಣ...

ಉಕ್ಕಿ ಬರುವ ಕಣ್ಣೀರ ಹನಿಯಲಿ
ಚಿಮ್ಮುವ ನಗೆ ಬುಗ್ಗೆಯಲಿ
ಸಾಗುತಿದೆ ಜೀವನ ಪಯಣ...

ನೋವುಗಳ ಮರೆಯುತಲಿ
ನಲಿವುಗಳ ಮೆಲುಕಿನಲಿ
ಓಲಾಡುತಿದೆ ಜೀವನ ಪಯಣ...

ಭಯದ ಕರಿ ನೆರಳಿನಲಿ
ಭರವಸೆಯ ಬೆಳಕಿನಲಿ
ಕಳೆಯುತಿದೆ ಜೀವನ ಪಯಣ...

ದುಃಖ ತರುವ ಸಾವಿನಲಿ
ಸಂಭ್ರಮದ ಹುಟ್ಟಿನಲಿ
ನಡೆಯುತಿದೆ ಜೀವನ ಪಯಣ...

ಗುರುವಾರ, ಮೇ 20, 2021

ತಿರುಗೇಟು

ತಿರುಗೇಟು

ಉರಿಯುತಿರುವ ಮೇಣದ ಬತ್ತಿ
ಉರಿಯಬಾರದು ಎಂದಿಗೂ ಹೊತ್ತಿ
ಆಗ ಜಗವೇ ಉರಿಯುವುದು ಕತ್ತಿ
ಎಲ್ಲಕೂ ಇದೆ ಅದರದೇ ಆದ ಮಿತಿ

ಮಿತಿ ಮೀರಿದ ಮನುಜನ ಸ್ವಾರ್ಥ
ಬದುಕಿಗೆ ಇಲ್ಲವಾಗಿದೆ ಇಂದು ಅರ್ಥ
ಹಣ, ಪ್ರತಿಷ್ಠೆ ಎಲ್ಲವೂ ಬರಿ ವ್ಯರ್ಥ
ಆಗಿದೆ ಇಲ್ಲಿ ಎಲ್ಲವೂ ಅನರ್ಥ

ತನ್ನ ಬುಡಕೆ ಬೆಂಕಿ ಹಚ್ಚಿಕೊಂಡಿದೆ ಬತ್ತಿಯು
ತನ್ನ ಸ್ವಾರ್ಥಕೆ ತಾನೆ ಆಗಿದೆ ಬಲಿಯು
ಮನುಜನ ಸ್ವಾರ್ಥಕೆ ಇಲ್ಲ ಕೊನೆಯು
ನಡೆಯುತಿದೆ ಇಲ್ಲಿ ವೈರಾಣುವಿನ ಧಾಳಿಯು

ಮನುಕುಲವೇ ತಪ್ಪಿಗೆ ದಂಡ ತೆರುತಿದೆ
ಬದುಕು ಇಲ್ಲಿ ಬಹು ದುಸ್ತರವಾಗಿದೆ
ಮಾರಣ ಹೋಮ ನಡೆಯುತಲೇ ಇದೆ
ಪ್ರಕೃತಿ ಮನುಜನಿಗೆ ತಿರುಗೇಟು ನೀಡಿದೆ


ಬಸವಣ್ಣ

ಹನ್ನೆರಡನೇ ಶತಮಾನದ ಮಹಾಮಾನವ ಬಸವೇಶ್ವರ
ಜನ್ಮ ಸ್ಥಳವು ಬಸವನ ಬಾಗೇವಾಡಿಯ ಇಂಗಳೇಶ್ವರ
ಮಾದರಸ, ಮಾದಲಾಂಬಿಕೆಯರ ಮಗನಾಗಿ ಜನನ
ಸಮಾಜದ ಜನರಲಿ ಅರಿವು ಮೂಡಿಸಿತು ಇವರ ವಚನ

ಸ್ಥಾಪಿಸಿದರು ಇವರು ಅನುಭವ ಮಂಟಪವನು
ಎಲ್ಲರಿಗೂ ತಿಳಿಸಿದರು ಶಿವ ಭಕ್ತಿಯ ಸಾರವನು
ಪರಿಚಯಿಸಿದರು ಸ್ತ್ರೀ-ಪುರುಷ ಸಮಾನತೆಯನು
ವಚನದಿ ಹೇಳಿದರು ಮನಶುದ್ಧಿಯ ಮಹತ್ವವನು

ಸಮಾನತೆಯನು ಜಗಕೆ ಸಾರಿದ ಮಹಾ ಹರಿಕಾರ
ಜಗದ ಜ್ಯೋತಿ ಎಂದು ಹೆಸರಾದ ಕ್ರಾಂತಿವೀರ
ಕಾಯಕವೇ ಕೈಲಾಸ ಎಂದು ಹೇಳಿದ ವಚನಕಾರ
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಹೋರಾಟಗಾರ 

ಜೀವಾನಿಲ

ಜೀವಾನಿಲ

ಮನುಜನು ದಾಟಿದ ಸ್ವಾರ್ಥದ ಪರಿಮಿತಿ
ಐಷಾರಾಮಿ ಜೀವನಕಿಲ್ಲವಾಯ್ತು ಇತಿಮಿತಿ
ವಿನಾಶದ ಅಂಚಿನಲ್ಲಿ ಜೀವಿಗಳ ಸಂತತಿ
ಪರಿಸರ ನಾಶವು ಮೀರಿತು ತನ್ನಯ ಮಿತಿ

ಕುಡಿದುರುಳಿಸಿದ ದಟ್ಟವಾದ ಕಾನನ
ಕೆಡಿಸಿದ ಪ್ರಕೃತಿಯ ಸಮತೋಲನ
ಬಗೆದು ಕೆಡಿಸಿದ ಭುವಿಯೆಂಬ ನಂದನ
ಮೌಲ್ಯ ಬದಿಗಿಟ್ಟು ನಡೆಸಿದ ಜೀವನ

ದೇವರು ನೋಡಿ ಬೇಸತ್ತ ಮನುಜನಾಟ
ಶುರುವಾಯ್ತು ಸೂಕ್ಷ್ಮಾಣು ಜೀವಿಯ ಆಟ
ಜೀವಾನಿಲ ಸಿಗದೆ ಜಗಕಾಯ್ತು ಪರದಾಟ
ಜೀವಕಾಗಿ ಮಾಡಿದ ಮನುಜ ಹೋರಾಟ

ಮುಂದಾದರೂ ಅರಿತು ನಡೆದರೆ ಜೀವನ
ಸ್ವಾರ್ಥವನು ಬದಿಗಿಟ್ಟು ನಡೆದರೆ ಪಾವನ
ಕೊನೆಯಾಗಲಿ ಅತಿಯಾದ ನಗರೀಕರಣ
ಇನ್ನಾದರೂ ಬದುಕಾಗಲಿ ಸುಂದರ ನಂದನ