ಭಾನುವಾರ, ಡಿಸೆಂಬರ್ 20, 2020
ಹೆಣ್ಣಿನ ಬದುಕು
ಜೊತೆಗಿಹುದು ಕಾನೂನು ಸಂವಿಧಾನ
ಆದರೂ ನಿಲ್ಲದಿದು ನೋವಿನ ಯಾನ
ಶೋಷಣೆಯಲೇ ಕಳೆಯುತಿದೆ ಜೀವನ
ಹೆಣ್ಣಿನ ಭಾವನೆಗಳಿಗಿಲ್ಲವು ಸ್ಪಂದನ
ನಿಲ್ಲಲಿಲ್ಲ ಅತ್ಯಾಚಾರಿಗಳ ಅಟ್ಟಹಾಸ
ಮೊಳಗುತಿದೆ ದುರುಳರ ಮಂದಹಾಸ
ವಿಕೃತ ಮನಸುಗಳ ಮನದ ಸಂತಸ
ಶೋಷಣೆಗಿದೆ ಶತಮಾನದ ಇತಿಹಾಸ
ಆಗಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ
ನೀಡಬಾರದು ಮತ್ತೆ ಜೀವನದ ಭಿಕ್ಷೆ
ತೊಡುವ ನಾರಿಯ ಸಮ್ಮಾನದ ದೀಕ್ಷೆ
ಸಮಾಜದಿ ನೆಲೆಸಲಿ ಶಾಂತಿ ಸುಭೀಕ್ಷೆ
ನಾರಿಯ ಕಣ್ಣೀರು ಕೊನೆಯಾಗಲಿ
ಅತ್ಯಾಚಾರಿಗಳ ಬಾಳು ಅಂತ್ಯವಾಗಲಿ
ಸುಭದ್ರ ಸಮಾಜ ನಿರ್ಮಾಣವಾಗಲಿ
ಹೆಣ್ಣಿನ ಶೋಷಣೆ ಮುಕ್ತಾಯವಾಗಲಿ
ರೈತ
ದುಡಿಮೆ ಹೊಲದಿ ಬೆವರು ಸುರಿಸಿ
ನೆತ್ತರನು ಅಲ್ಪಸ್ವಲ್ಪ ಜೊತೆಗೆ ಬೆರೆಸಿ
ಮೂಳೆಯ ಪರಿಶ್ರಮವ ಹರಿಸಿ
ಬೆಳೆಯುವೆನು ನಾನು ಪುಟ್ಟ ಸಸಿ
ಹೊರುವೆ ಮೈತುಂಬ ಸಾಲವನು
ಬೆಳೆಯನೇ ನಂಬಿ ಬದುಕುವೆನು
ತಿಳಿಯೇ ಪ್ರಕೃತಿಯ ಆಟವನು
ಕಷ್ಟದಲೇ ನೂಕುವೆ ದಿನವನು
ಕೊಡುವೆ ಜಗದ ಜನಕೆ ಅನ್ನವನು
ಕೇಳರು ಯಾರೂ ನನ್ನ ಗೋಳನು
ಚಪ್ಪಲಿಯೂ ಇಲ್ಲದೆ ನಡೆವೆನು
ನನಗೂ ನೀಡಿ ಸಹಾಯವನು
ಇಲ್ಲ ಸರ್ಕಾರದ ಸಹಾಯ ಸವಲತ್ತು
ಓಟು ಕೇಳುವಾಗ ನನ್ನ ನೆನಪಿತ್ತು
ಎಲ್ಲರೂ ನಂಬಿಸಿ ಕೊಯ್ವರು ಕತ್ತು
ಸಾಗುತಿರುವೆ ಬದುಕ ನೊಗ ಹೊತ್ತು
ದ್ವಿಮುಖ
ಕವಲೊಡೆದಿದೆ ಭಾವಗಳ ಬಾಳು
ಜೊತೆಯಾಗಿ ಕಂಡ ಕನಸು ಹೋಳು
ಬಾಳಾಗಿದೆ ಈಗ ಬರಿಯ ಗೋಳು
ಕಹಿಯಾಗಿದೆ ಜೀವನದ ತಿರುಳು
ಸಾಗರದ ಆಳಕೂ ಹರಡಿದೆ ನೋವು
ನೀಲ ಶರಧಿಗೂ ತಾಕಿದೆ ವಿರಹದ ಕಾವು
ಕಳಚುತಿದೆ ಒಲವ ಭಾವ ಬಂಧನವು
ಭಿನ್ನತೆಯು ಮೂಡಿ ಆಗಿದೆ ದ್ವಿಮುಖವು
ಮನವೆಂಬ ಸರೋವರದಿ ಭೋರ್ಗರೆತ
ಭಾವ ಸಾಗರದಲೆಗಳಲಿ ಬಲು ಏರಿಳಿತ
ಮನದೊಳಗಣ ನೋವಿನದೇ ತುಡಿತ
ಸ್ತಬ್ಧವಾಗಿದೆ ಈ ಹೃದಯದ ಮಿಡಿತ
ಒಂಟಿಯಾಗಿದೆ ಬಾಳ ಸಂಜೆಯ ಪಯಣ
ತಿಳಿಯುತಿಲ್ಲವು ಹುಡುಕಿದರೂ ಕಾರಣ
ತುಂಬಿದೆ ಮನದಿ ಬರಿ ನೋವ ಹೂರಣ
ಭಾರವಾಗಿದೆ ಒಲವಿಲ್ಲದೇ ಅಂತಃಕರಣ
ಕಂದಾ
ಮುದ್ದು ಮೊಗದ ಹಸುಕಂದ
ನಿನ್ನಾ ನಗುವೇ ಬಲು ಚೆಂದ
ನೀ ನನ್ನ ಮನದ ಆನಂದ
ಜನ್ಮಾಂತರದ ಈ ಅನುಬಂಧ
ಕೃಷ್ಣನಾಗು ಯಶೋದೆಯಾಗುವೆ
ರಾಮನಾದರೆ ಕೌಸಲ್ಯೆಯಾಗುವೆ
ಗಣಪನಾದರೆ ನಾ ಗೌರಿಯಾಗುವೆ
ನಾ ನಿನ್ನಯ ಹಿಂದಿರುವೆ ಮಗುವೆ
ಅಭ್ಯಂಗ ಧಾರೆಯ ಮೈಗೆ ತೀಡುವೆ
ಜಲಧಾರೆಯಲಿ ಸ್ನಾನ ಮಾಡಿಸುವೆ
ಪ್ರೀತಿಯಲಿ ಕೈತುತ್ತನು ನೀಡುವೆ
ಯನ್ನ ಮಡಿಲಲಿ ಮಲಗು ಮಗುವೆ
ನನ್ನ ಜೀವದ ಜೀವವು ನೀನು
ಮನೆಯ ನಂದಾದೀಪವು ನೀನು
ಈ ಬಾಳ ಹಸಿರು ಉಸಿರು ನೀನು
ನಿನ್ನ ಕಂಠದ ಸ್ವರವು ಸವಿಜೇನು
ನಿನ್ನಾ ನಗುವೇ ಬಲು ಚೆಂದ
ನೀ ನನ್ನ ಮನದ ಆನಂದ
ಜನ್ಮಾಂತರದ ಈ ಅನುಬಂಧ
ಕೃಷ್ಣನಾಗು ಯಶೋದೆಯಾಗುವೆ
ರಾಮನಾದರೆ ಕೌಸಲ್ಯೆಯಾಗುವೆ
ಗಣಪನಾದರೆ ನಾ ಗೌರಿಯಾಗುವೆ
ನಾ ನಿನ್ನಯ ಹಿಂದಿರುವೆ ಮಗುವೆ
ಅಭ್ಯಂಗ ಧಾರೆಯ ಮೈಗೆ ತೀಡುವೆ
ಜಲಧಾರೆಯಲಿ ಸ್ನಾನ ಮಾಡಿಸುವೆ
ಪ್ರೀತಿಯಲಿ ಕೈತುತ್ತನು ನೀಡುವೆ
ಯನ್ನ ಮಡಿಲಲಿ ಮಲಗು ಮಗುವೆ
ನನ್ನ ಜೀವದ ಜೀವವು ನೀನು
ಮನೆಯ ನಂದಾದೀಪವು ನೀನು
ಈ ಬಾಳ ಹಸಿರು ಉಸಿರು ನೀನು
ನಿನ್ನ ಕಂಠದ ಸ್ವರವು ಸವಿಜೇನು
ದೇವ ಮಾನವ ಯೇಸು
ಬೆತ್ಲೆಹೇಂನಲ್ಲಿ ಜನಿಸಿದ ಕೂಸು
ದೇವ ಮಾನವನ ಹೆಸರು ಏಸು
ಮೇರಿ-ಜೋಸೆಫ್ ರ ಸುತನೀತ
ಅಹಿಂಸೆಯ ಜಗಕೆ ಸಾರಿದಾತ
ಚುಮುಚುಮು ಚಳಿಯಲಿ
ಇಪ್ಪತ್ತೈದು ಡಿಸೆಂಬರ್ ನಲಿ
ಯೇಸುಕ್ರಿಸ್ತನ ಜನುಮ ದಿನವು
ಇದುವೇ ಕ್ರಿಸ್ ಮಸ್ ಹಬ್ಬವು
ಬರುವನು ಕೆಂಪಂಗಿಯ ತಾತಾ
ಉಡುಗೊರೆಯ ತರುವ ತಾತಾ
ಕ್ರಿಸ್ ಮಸ್ ಟ್ರೀಗೆ ದೀಪಾಲಂಕಾರ
ಸ್ಮರಿಸುತ ಯೇಸುವಿನ ಉಪಕಾರ
ಸ್ನೇಹ ಸಹಬಾಳ್ವೆ ಇವನ ಉಸಿರು
ಶಾಂತಿ ಸಹನೆ ಸಾರಿ ಜಗ ಹಸಿರು
ಪಠಿಸುತ ಪವಿತ್ರ ಬೈಬಲ್ ಗ್ರಂಥವನು
ತಾನೇ ಹೊರುತಲಿ ಎಲ್ಲರ ನೋವನು
ಶುಕ್ರವಾರ, ಡಿಸೆಂಬರ್ 11, 2020
ಪಾರಿ
ನನ್ನಯ ಮುದ್ದಿನ ಗೊಂಬೆ ಪಾರಿ
ಇದುವೇ ನನ್ನಯ ಮೆಚ್ಚಿನ ಆಟಿಕೆ
ಗುಲಾಬಿ ಬಣ್ಣದ ನನ್ನಯ ಗೊಂಬೆ
ನಿಮಗೂ ಇದುವು ಆಡಲು ಬೇಕೇ?
ಪಾರಿ ಎಂಬ ಮುದ್ದಿನ ಗೊಂಬೆಯ
ಅಪ್ಪನು ಜಾತ್ರೆಯಿಂದ ತಂದಿಹನು
ಪಿಳಿ ಪಿಳಿ ಕಣ್ಣಿನ ಗೊಂಬೆಯ
ನನಗೆ ಆಡಲು ಜೊತೆ ಮಾಡಿಹನು
ಜರಿಯ ಲಂಗವನು ಧರಿಸಿರುವ
ಗೊಂಬೆಯ ಜೊತೆಗೆ ನನ್ನ ಊಟ
ಹೊಂಬಣ್ಣದ ಕೂದಲಿನ ಚೆಂದದ
ಗೊಂಬೆ ಇಲ್ಲದೆ ಆಗದು ಆಟ-ಪಾಠ
ಗೊಂಬೆಯ ಜೊತೆಗೆ ಆಡುವೆ
ಅಮ್ಮ-ಮಗುವಿನ ಆಟವನು
ತಲೆಯನು ಬಾಚಿ ಸ್ನಾನವ
ಮಾಡಿಸಿ ತಿನಿಸುವೆ ಊಟವನು
ಮುದ್ದಿನ ಗೊಂಬೆಯೇ ಪಾರಿ
ನೀ ಎಂದಿಗೂ ನನ್ನಯ ಗೆಳತಿ
ಮರೆಯಲಾರೆ ಎಂದೆಂದಿಗೂ
ನೀನೇ ಬಾಲ್ಯದ ಜೊತೆಗಾತಿ
ಗುರುವಾರ, ಡಿಸೆಂಬರ್ 10, 2020
ನಂಬಿಕೆ
ಅಳಸಬೇಕು ನಾವು
ಮೂಢನಂಬಿಕೆಗಳನು
ಜೀವನದಿ ಇಡುವ
ಹೊಸ ಹೆಜ್ಜೆಯನು
ಕಳೆಯುತಿದೆ ಹಳೆಯ
ಏಳುಬೀಳಿನ ವರುಷವು
ಬರುತಲಿದೆ ಸಂತಸದಿ
ಹೊಸ ಮನ್ವಂತರವು
ಅಜ್ಞಾನ ಅಂಧಕಾರವನು
ನಾವು ಓಡಿಸುವ ಇಂದು
ಸುಜ್ಞಾನದ ಜ್ಯೋತಿಯನು
ಬೆಳಗಿಸುವ ಬಾ ಬಂಧು
ಮಹಿಳೆಯರಿಗೆ ನೀಡುವ
ಸ್ವಾತಂತ್ರ್ಯದ ಸವಿಯ
ನಂಬಿಕೆಯ ತುಂಬುತಾ
ಮನುಕುಲಕೆ ಅಭಯ
ಬುಧವಾರ, ಡಿಸೆಂಬರ್ 9, 2020
ನೀರಿನ ಸದ್ಭಳಕೆ
ಬನ್ನಿ ಉಳಿಸೋಣ ಜೀವಜಲ
ಹಸಿರಾಗಿಸುವ ನಮ್ಮಯ ನೆಲ
ಉಳಿಸುವ ಜೀವಿಗಳ ಪ್ರಾಣ
ಮಕ್ಕಳೇ ತೊಡುವ ಇಂದೇ ಪಣ
ಪೋಲು ಮಾಡದಿರಿ ಹನಿ ನೀರು
ಉಳಿಸುವ ಜೀವಜಲದ ತುಂತುರು
ಮಾಡುವ ಅಂತರ್ಜಲದ ಉಳಿಕೆ
ದಿನನಿತ್ಯ ಮಾಡುವ ನೀರಿನ ಸದ್ಭಳಕೆ
ಹಸಿರೇ ನಮ್ಮಯ ಜೀವದುಸಿರು
ಹಸಿರು ಉಳಿದರೆ ಉಂಟು ನೀರು
ಅತಿವೃಷ್ಟಿ ಅನಾವೃಷ್ಟಿ ತಡೆಯುವ
ಹಸಿರು ಗಿಡಗಳನು ನಾವು ಬೆಳೆಸುವ
ಕಾಡು ಕಡಿದರೆ ನೀರಿಗೆ ಹಾಹಾಕಾರ
ಜೀವ ಸಂಕುಲಗಳಿಗೆ ಸಂಚಕಾರ
ಕಲಿಯುವ ನೀರಿನ ಹಿತಮಿತ ಬಳಕೆ
ಇದುವೆ ಆಗಿದೆ ಮುಂದಿನ ಗಳಿಕೆ
ಕರೆಕಟ್ಟೆಗಳನು ಕಲುಷಿತಗೊಳಿಸದೆ
ಸ್ವಚ್ಛ ಇಡುವ ಪಣ ತೊಡುವ ಇಂದೆ
ಪರಿಸರವನು ಇರಿಸುವ ಸ್ವಚ್ಛವಾಗಿ
ಎಲ್ಲರನು ಕರೆಯುವ ನಾವು ಕೂಗಿ
ಮಂಗಳವಾರ, ಡಿಸೆಂಬರ್ 8, 2020
ಮಧುರ ಬಾಲ್ಯ
ಮರೆಯಲಾಗದ ಮಧುರ ಬಾಲ್ಯ
ಇದಕೆ ಕಟ್ಟಲಾಗದು ನಿಖರ ಮೌಲ್ಯ
ಬಾಲ್ಯದ ಕ್ಷಣಗಳಿಗೆ ಅಲ್ಲವೂ ತುಲ್ಯ
ಮರಳಿ ಬರಬಾರದೇ ಆ ಬಾಲ್ಯ
ಸೀಬೆ ಹಣ್ಣು ಕದ್ದು ತಿಂದ ನೆನಪು
ಮರವನು ಹತ್ತಿ ಬಿದ್ದ ಹುರುಪು
ಸುತ್ತ ಇರುವ ಸ್ನೇಹಿತರ ಗುಂಪು
ಬಾಲ್ಯದ ನೆನಪು ಮನದಿ ಸೊಂಪು
ವರ್ಣಮಾಲೆ ಕಲಿತ ಮುದವು
ಶಾಲೆಯ ಮೊದಲ ದಿನದ ಭಯವು
ಮರೆಯದ ಗುರುಗಳ ಹೊಡೆತವು
ಮನಃ ಪಟಲದಿ ಹಸಿರು ನಿತ್ಯವು
ಕುಂಟೆ-ಬಿಲ್ಲೆ, ನೆಲ್ಲಿ ಕಾಯಿಯ ಸವಿ
ಸ್ವರ್ಗವು ಎಂದೂ ಬಾಲ್ಯದಿ ಭುವಿ
ಚಿಂತೆ, ಬಡತನ ಅಂದು ಗಿರವಿ
ಬಾಲ್ಯದ ನೆನಪಲಿ ಆದೆನು ಕವಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)