ಬುಧವಾರ, ಮಾರ್ಚ್ 24, 2021

ಗ್ರಾಮೀಣ ಮಹಿಳೆ ಮತ್ತು ಮಹಿಳಾ ದಿನಾಚರಣೆ

ಹಿಳಾ ದಿನಾಚರಣೆ

ತಿಳಿದಿದ್ದ ಅವಳಿಗೆ ತನ್ನದೇ
ದಿನಾಚರಣೆ ಎಂದು
ಕೆಲಸ ಮಾಡುತಿಹಳು
ಎಂದಿನಂತೆ ನಾಲ್ಕಕ್ಕೆ ಎದ್ದು

ಮನೆಯ ಕಸ ತೆಗೆದು
ರಂಗವಲ್ಲಿಯ ಹಾಕಿ
ಅಯ್ಯೋ ! ಕೊಟ್ಟಿಗೆಯ
ಕೆಲಸವಿದೆ ಬಾಕಿ

ಗಂಡನ ಜೊತೆಗೆ
ಹೊಲಕೆ ಹೋಗಬೇಕು
ತಿಂಡಿಯ ಜೊತೆಗೆ ಅಡಿಗೆ
ಕೆಲಸವನೂ ಮುಗಿಸಬೇಕು

ಮಹಿಳಾ ದಿನಾಚರಣೆ ಶುಭಾಶಯ
ಸಂಜೆ ಮಗ ತಿಳಿಸುವನು
ಅವಳೆಂದಳು, ಹೀಗೂ ಉಂಟೆ !
ನನಗೆ ತಿಳಿಯದು ಇದು ಏನು?

ವೇದಾವತಿ ಭಟ್ಟ
ಮುಂಬೈ 

ಸ್ನೇಹ

ಸ್ನೇಹ

ರಕ್ತ ಸಂಬಂಧವನು ಮೀರಿದ ಅನುಬಂಧ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಬಂಧ
ಸ್ನೇಹವೆಂಬ ಹೆಸರು ಇದಕೆ ಎಂತ ಚೆಂದ
ಎಲ್ಲ ಕಟ್ಟು-ಕಟ್ಟಳೆಗಳ ಮೀರಿದ ಸಂಬಂಧ

ನೋವು-ನಲಿವುಗಳಲಿ ಜೊತೆಯಾಗುವ ಸ್ನೇಹ
ಇಲ್ಲ ಈ ಬಂಧದಲಿ ಬೇರೆ ಯಾವ ಮೋಹ
ಮನಸು ಒಂದೇ ಆದರೆ ಇಹುದು ಎರಡು ದೇಹ
ಈ ಬಂಧದಲಿ ಎಂದಿಗೂ ಬೇಡ ಸಂದೇಹ

ಸ್ನೇಹಕಾಗಿ ನೀಡುವರು ತಮ್ಮಯ ಜೀವ
ಸ್ನೇಹವೆಂದರೆ ಹೀಗೆ ಬಹು ನವಿರು ಭಾವ
ಮರೆಸುವುದು ಮನಸಿನ ಎಲ್ಲ ನೋವ
ಹೊಮ್ಮಿಸುವುದು ಮನದೊಳಗಿನ ನಗುವ

ಮಂಗಳವಾರ, ಮಾರ್ಚ್ 16, 2021

ಹೆಣ್ಣೆಂದರೆ...

ಹೆಣ್ಣೆಂದರೆ...
ಅಲ್ಲವು ಭೋಗದ ವಸ್ತು
ಹೇಳಿಸಬೇಡಿ ಎಲ್ಲಕು ಅಸ್ತು
ವಂಚನೆಗೆ ಬೀಳಲಾರಳು ಬೆಸ್ತು

ಹೆಣ್ಣೆಂದರೆ...
ನೋವು ಅಡಗಿಸಿ ನಗುವವಳು
ಸಂಸಾರದ ಕಣ್ಣು ಅವಳು
ತನ್ನನ್ನೇ ತೇಯ್ದು ಕೊಳ್ಳುವವಳು

ಹೆಣ್ಣೆಂದರೆ...
ತ್ಯಾಗಮಯಿ, ಸಹನಾ ಮೂರ್ತಿ
ಭುವಿಯಂತೆ ಕ್ಷಮಯಾಧರಿತ್ರಿ
ಜೀವ ಪಣಕಿಟ್ಟು ಜೀವ ಕೊಡುವ ಶಕ್ತಿ

ಹೆಣ್ಣೆಂದರೆ...
ಗಂಗೆಯಂತೆ ಇವಳು ಪಾವನಳು
ಬೀಸುವ ಗಾಳಿಯಂತೆ ಶುದ್ಧಳು
ಬೆಂಕಿಯಂತೆ ದಹನಶೀಲಳು

ಹೆಣ್ಣೆಂದರೆ...
ಮನೆ ಬೆಳಗುವ ನಂದಾದೀಪ
ತಾಯಿಯಾಗಿ ದೇವರರೂಪ
ಸಹಿಸುವಳು ಕೋಪ-ತಾಪ

ಹಸಿರಿನ ದೀಪ

ಹಚ್ಚುವ ನಾವು ಹಸಿರು ದೀಪ
ಕಡಿಮೆ ಮಾಡುವ ಪ್ರಕೃತಿ ತಾಪ
ಪ್ರಕೃತಿಯುಲಿ ದೇವರ ರೂಪ
ಬೇಡ ನಮಗೆ ಪ್ರಕೃತಿಯ ಕೋಪ

ಹಸಿರೇ ನಮ್ಮಯ ಉಸಿರು
ಕೆಡಿಸಿದಿರಿ ಭುವಿಯ ಬಸಿರು
ಕೈಕೆಸರಾದರೆ ಬಾಯಿಗೆ ಮೊಸರು
ಬೇಡ ನಮಗೆ ಬರಿಯ ಹೆಸರು

ಕಾಡಿನಿಂದಲೇ ನಾಡಿಗೆ ಉಳಿವು
ನೀಗುವುದು ಜೀವಿಯ ಹಸಿವು
ಹಸಿರಿನಿಂದಲೇ ನಮಗೆ ಬಲವು
ಮಾತೆ ನೀಗಿಸುವಳು ಎಲ್ಲ ನೋವು

ಕೊನೆಯಾಗಲಿ ಪ್ರಕೃತಿ ನಾಶ
ದೊರೆಯುವುದಾಗ ಸಂತೋಷ
ನಿಲ್ಲಲಿ ಜೀವಸಂಕುಲದ ವಿನಾಶ
ಸುರಿಯಲಿ ಧೋ ಎಂದು ವರ್ಷ

ಮಾಡುವ ಪ್ರಕೃತಿ ಸಂರಕ್ಷಣೆ
ಇದು ನಮ್ಮೆಲ್ಲರ ನೈಜ ಹೊಣೆ
ಬರದು ಆಗ ಮುಂದೆ ಬವಣೆ
ಇರಲಿ ಎಂದು ಪ್ರಕೃತಿಯ ಕರುಣೆ

ಶನಿವಾರ, ಮಾರ್ಚ್ 13, 2021

ಮಹಿಳಾ ದಿನಾಚರಣೆ



ಮಹಿಳೆಯರ ದಿನಾಚರಣೆ
ಆಗದಿರಲಿ ಕೇವಲ ಆಚರಣೆ
ಇರಲಿ ಸಮ್ಮಾನದ ಹೊಣೆ
ಆಗಲಿ ಮಹಿಳೆಯರ ರಕ್ಷಣೆ

ಮನೆಯಲಿ ಮನೆಮಂದಿ ಕಿರುಕುಳ
ಹೊರಗೆ ಲೈಂಗಿಕ ಶೋಷಣೆಯ ಆಳ
ಎಲ್ಲರ ತಪ್ಪಿಗೂ ಹೆಣ್ಣಿಗೆ ಬೈಗುಳ
ಎಂದಿಗೆ ಕೊನೆ ಮಹಿಳೆಯ ಕಳವಳ

ಭಾಷಣದಿ ಮೀಸಲಾತಿ, ಸಮಾನತೆ
ಮುಗಿಯದು ಹೆಣ್ಣಿನ ಗೋಳಿನ ಕಥೆ
ನಿತ್ಯ ನೂತನವು ಶೋಷಣೆಯ ವ್ಯಥೆ
ಅತ್ಯಾಚಾರವೆಂಬುದು ಭೀಕರತೆ

ನೆನಪಿರಲಿ ಮಹಿಳೆ ಪುರುಷನ ಸಮಾನ
ಮಹಿಳೆಯರಿಗೂ ದೊರೆಯಲಿ ಸಮ್ಮಾನ
ಹಕ್ಕು-ಸ್ವಾತಂತ್ರ್ಯ ಸಿಗಲಿ ಅನುದಿನ
ಏಕೆ ಸಂಭ್ರಮ ಕೇವಲ ಒಂದು ದಿನ?

ವೇದಾವತಿ ಭಟ್ಟ
ಮುಂಬೈ 

ಜೀವನ ಪಯಣ

ಜೀವನ ಪಯಣ

ಎಂತಲಿಂದ ಎತ್ತ ಸಾಗಿತು ಬಾಳ ಪಯಣ
ಬರೀ ಕಷ್ಟಗಳ ಸಂಕೋಲೆಯಲಿ ಬಂಧನ
ಮರೀಚಿಕೆಯು ಸುಖ-ಸಂತಸಗಳ ಕ್ಷಣ
ನೋವುಗಳನೇ ಹಾಸಿ ಹೊದ್ದಿಹ ಜೀವನ

ಒಬ್ಬಂಟಿಯು ನಾನು ಹುಟ್ಟು-ಸಾವಿನಲಿ
ಬರುವರೆಲ್ಲ ಬಂಧು-ಬಳಗ ನಲಿವಲಿ
ಯಾರಿಗೆ ಯಾರಿಲ್ಲವು ಈ ಭುವಿಯಲಿ
ತಿರುಗಿಯು ನೋಡರೂ ಮುಪ್ಪಿನಲಿ

ಹೊಟ್ಟೆ ಪಾಡಿಗಾಗಿ ನಿರಂತರ ಅಲೆದಾಟ
ಬಾಳಿದು ಅನುದಿನವೂ ಜಂಜಾಟ
ಬಲ್ಲವರು ಯಾರು ಆ ಭಗವಂತನ ಆಟ
ಬೀರದಿರು ವಿಧಿಯೇ ನಿನ್ನ ಕ್ರೂರ ನೋಟ

ಹಣದ ಮುಂದೆ ಹೆತ್ತ ಮಕ್ಕಳು ದೂರ
ಮರ್ಕಟನೇ ನೀನಾಗಿರುವೆ ಜೊತೆಗಾರ
ಮುಗಿವುದೆಂದು ಭುವಿಯ ಋಣಭಾರ
ಸಾಕಾಗಿದೆ ಈ ಜೀವನವೆಂಬ ಸಂಸಾರ

ಶನಿವಾರ, ಮಾರ್ಚ್ 6, 2021

ಜೀವನ ಮತ್ತು ನಂಬಿಕೆ

ಜೀವನ ಮತ್ತು ನಂಬಿಕೆ

ಜೀವನದಲಿ ಇರಬೇಕು ನಂಬಿಕೆ
ಇದಕಿಲ್ಲವು ಯಾವ ಹೋಲಿಕೆ
ಇಣುಕದಿರಲಿ ಈ ಅಪನಂಬಿಕೆ
ದೇವರಲಿ ಕಳಕಳಿಯ ಕೋರಿಕೆ

ಅಪ್ಪನ ನಂಬುವಂತೆ ಮಗುವು
ಜೀವನದಿ ಇರಲಿ ನಂಬಿಕೆ ಬಲವು
ನಂಬಿದರೆ ಸಿಗುವುದು ನೋವು
ಇಲ್ಲವೇ ಸವಿಯಾದ ಬಾಂಧವ್ಯವು

ಇಹುದು ಹಲವು ಮೂಢನಂಬಿಕೆ
ನಂಬಿ ಮೋಸ ಹೋಗದಿರಿ ಜೋಕೆ
ಹರಡಲಿ ಬಾಂಧವ್ಯದ ಮಾಲಿಕೆ
ಸುಗಮವಾಗಿ ಸಾಗಲಿ ಜೀವನ ನೌಕೆ

ಬದುಕು ನಿರಂತರವಾದ ಪಯಣ
ನಂಬಿಕೆಯ ನೆಲೆಯಲಿ ಬದುಕೋಣ
ತುಂಬಿರಲಿ ನಂಬಿಕೆಯು ಕಣಕಣ
ಬದುಕಾಗಲಿ ಸವಿಯಾದ ಹೂರಣ

ನಂಬಿಕೆಯೇ ಜೀವನದ ತಳಹದಿ
ಸುಖದ ಜೀವನಕಿದುವೇ ಹಾದಿ
ನಂಬಿಕೆಯು ತರುವುದು ನೆಮ್ಮದಿ
ಹೊಸ ಬದುಕಿಗಿದು ಆಗಿದೆ ಆದಿ

ಛತ್ರಪತಿ ಶಿವಾಜಿ



ಶಿವನೇರಿಯಲಿ ಜನಿಸಿದ ಮಹಾವೀರ ಶಿವಾಜಿ
ಇವನನು ಹೆತ್ತವರು ಜೀಜಾಬಾಯಿ-ಶಹಾಜಿ
ವೈರಿಗಳೊಡನೆ ಮಾಡಿಕೊಳ್ಳಲಾರ ಇವ ರಾಜಿ
ಮರಾಠಾ ಸಾಮ್ರಾಜ್ಯದ ವೀರರತ್ನವು ಶಿವಾಜಿ

ಸುಲ್ತಾನಿ ದೊರೆಗಳಿಗೆ ಸಿಂಹಸ್ವಪ್ನ ಈ ವೀರ
ಚರಿತ್ರೆಯಲಿ ಇವನ ಹೆಸರು ಅಜರಾಮರ
ದಾದಾಜೀ ಕೊಂಡದೇವನ ಶಿಷ್ಯ ಈ ಶೂರ
ಹಿಂದೂಸ್ಥಾನ ಒಗ್ಗೂಡಿಸಲು ಸಾರಿದ ಸಮರ

ಸಾಯಿಬಾಯಿಯೊಂದಿಗೆ ಕೂಡಿಬಂತು ಕಂಕಣ
ರಾಯಘಡದಲ್ಲಿ ಇವನಿಗೆ ಕಿರೀಟ ಧಾರಣ
ಕೈಬೀಸಿ ಕರೆಯಿತು ವೀರ ಸಾಮ್ರಾಟನಿಗೆ ರಣ
ತೊಟ್ಟ ಇವನು ಜಯವ ಗಳಿಸುವ ಪಣ









ಅರುಣೋದಯ


ಬಾನಲಿ ಮೂಡಿಹ ಸುಂದರ ನೇಸರ
ಕಳೆಯುವ ಮನದಿ ತುಂಬಿಹ ಬೇಸರ
ತನು-ಮನದಿ ಚೈತನ್ಯದ ಸಂಚಾರ
ಪ್ರಕೃತಿಗೆ ಭಾನುವಿನ ಕಿರಣದ ಹಾರ

ಕರಗುತಿದೆ ಇಬ್ಬನಿಯ ಮುತ್ತಿನ ತೋರಣ
ಬೆಳಗಿದು ಸುಂದರ, ಸವಿಯ ಹೂರಣ
ಭುವಿಯ ತುಂಬಾ ಚೆಲ್ಲಿದೆ ಹೊಂಗಿರಣ
ಕೆಂಪು ಚೆಲ್ಲಿ ಬಣ್ಣವಾಗಿದೆ ಮೂಡಣ

ಹರಡಿದೆ ಅರಳುವ ಹೂವಿನ ಕಂಪು
ಮನಸಿಗೆ ನೀಡಿದೆ ಆಹ್ಲಾದದ ತಂಪು
ಜೊತೆಯಲಿ ಚಿಲಿಪಿಲಿ ಉಲಿಯ ಇಂಪು
ಆವರಿಸಿದೆ ಬೆಚ್ಚನೆ ಬಿಸಿಲಿಗೆ ಹುರುಪು

ನೇಸರನುದಯದಿ ನಾಚಿ ನೀರಾದ ಭುವಿ
ಸಕಲ ಜೀವರಾಶಿಗೂ ಈ ಬೆಳಗು ಸವಿ
ಝೇಂಕರಿಸುತಿದೆ ಸುಪ್ರಭಾತದ ಪಲ್ಲವಿ
ಅರುಣೋದಯವ ನೋಡಿ ಆದೆ ಕವಿ

ಸವಿಜೇನು

ಸವಿಜೇನು

ಮರೆಯದಿರು ಮನವೇ ಸವಿನೆನಪುಗಳನು
ತೊರೆಯದಿರು ಮನವೇ ಬಾಂಧವ್ಯಗಳನು
ಸಹಬಾಳ್ವೆಯಲಿ ನೋಡು ಬಾಳ ಚೆಲುವನು
ಕೂಡಿ ಬಾಳಿದರೆ ಜೀವನವು ಸವಿಜೇನು

ಜೀವನವು ನಿರತ ಭಾವದಲೆಗಳ ಹೊನಲು
ಬಡಿಯಲು ಬಹುದು ಭೀಕರ ಬರಸಿಡಿಲು
ಹರಿಯಲೂ ಬಹುದು ಸಂತಸದ ಕಡಲು
ಬಾಳ ದಾರಿಯ ತುಂಬಾ ಹಲವು ಕವಲು

ಕಹಿಯ ಹಾಲಾಹಲವನು ಬೇಗನೆ ಮರೆತು
ಮೂಡಿಸಲು ಪಣತೊಡುವ ನಮ್ಮ ಗುರುತು
ಕಷ್ಟ-ಸುಖದ ಜೀವನದಿ ಸಮವಾಗಿ ಬೆರೆತು
ಮನದ ತುಡಿತ-ಮಿಡಿತಗಳ ಆದಷ್ಟು ಅರಿತು

ಬುದ್ಧಿಯ ಮಾತು ಕೇಳಿದರೆ ಆಗಬಹುದು ತಪ್ಪು
ಮನದ ಮಾತನು ಕೇಳುತಲಿ ಅದರನೇ ಒಪ್ಪು
ಅಮೂಲ್ಯ ಮುತ್ತ ಕೊಡುವುದು ಸಾಗರದ ಚಿಪ್ಪು
ಒಳ್ಳೆಯ ಮೌಲ್ಯಗಳಿಗೆ ಇಲ್ಲ ಎಂದಿಗೂ ಮುಪ್ಪು

ಮೆಲುಕು ಹಾಕುವ ನಾವು ನೆನಪುಗಳ ಯಾನ
ಇದರಲೇ ಅಡಗಿಹುದು ನಮ್ಮಯ ಜೀವನ
ಹೃದಯವಿದು ಸಿಹಿ-ಕಹಿ ನೆನಪುಗಳ ಸದನ
ಮೀಟುತಿಹುದು ಅದುವು ಇಂಪಾದ ಗಾನ


ಸಿಂಪಿ ಲಿಂಗಣ್ಣ

*ಜನಪದ ರತ್ನ ಸಿಂಪಿ ಲಿಂಗಣ್ಣ*

ವಿಜಯಪುರ ಜಿಲ್ಲೆಯ ಇಂಡಿಯ
ಚಡಚಣ ಗ್ರಾಮದಿ ಜನಿಸಿದರು
ಶಿವಯೋಗಿ-ಸಾವಿತ್ರಿ ದಂಪತಿಯ
ಪ್ರೇಮದ ಪುತ್ರ ಲಿಂಗಣ್ಣನವರು

ಮುಲ್ಕಿ ಮುಗಿಸಿ ಅಧ್ಯಾಪಕ ವೃತ್ತಿ
ಶೃದ್ಧೆಯಿಂದಲಿ ಪ್ರಾರಂಭಿಸಿದರು
ಗರತಿಯ ಹಾಡು, ಜೀವನ ಸಂಗೀತ
ಕವನ ಸಂಕಲನ ಪ್ರಕಟಿಸಿದರು

ಬೆಟ್ಟದ ಹೊಳೆ ಇವರ ಕಾದಂಬರಿ
ಹಲವಾರು ನಾಟಕ ರಚಿಸಿದರು
ನಾಗಾಲೋಟ, ಬಾಳ ಸಂಜೆಯ ಹಿನ್ನೋಟ
ಕೃತಿಯಲಿ ಆತ್ಮ ಚರಿತ್ರೆ ಬರೆದರು

ಜಾನಪದ ಸಾಹಿತ್ಯದ ಉಳಿವಿಗೆ
ಅವಿರತ ಶ್ರಮವಹಿಸಿದರು ಇವರು
ಜಾನಪದ ಜೀವಾಳ ಎಂಬ ಜಾನಪದ
ಕೃತಿಯ ವಿಮರ್ಶೆ ಹೊರಡಿಸಿದರು

ಕರ್ನಾಟಕ ಜನಪದ ರತ್ನ ನಮ್ಮ
ಹೆಮ್ಮೆಯ ಕವಿ ಸಿಂಪಿ ಲಿಂಗಣ್ಣನವರು
ಜಾನಪದ ದಿಗ್ಗಜರೆಂದು ಖ್ಯಾತಿಯ
ಪಡೆದ ನವೋದಯದ ಸಾಹಿತಿ ಇವರು

ಇವರನು ಅರಸಿ ಬಂದ ಪ್ರಶಸ್ತಿ,
ಗೌರವ-ಪುರಸ್ಕಾರಗಳು ಹಲವಾರು
ಪ್ರತಿವರ್ಷ ಕೊಡುವ ಸಿಂಪಿ ಲಿಂಗಣ್ಣ
ಪ್ರಶಸ್ತಿಯಿಂದ ಚಿರಸ್ಥಾಯಿ ಇವರು

ಅಮ್ಮ


ನವ ಮಾಸವ ಮಡಿಲೊಳಗೆ
ಕಾವ ದೇವತೆ ತಾಯೇ
ಜೀವವನೇ ಪಣಕೆ ಇಟ್ಟು
ಜೀವ ಕೊಡುವ ಮಾಯೇ

ನಿನ್ನ ಮಹಿಮೆಯ ಬಣ್ಣಿಸಲು
ನನ್ನಲಿ ಪದವಿಲ್ಲ ತಾಯೇ
ನಿನ್ನ ಹಿರಿಮೆಗೆ ಸಾಟಿಯಿಲ್ಲ
ನನ್ನನು ನೀನೇ ಕಾಯೇ

ಎದೆಹಾಲೆಂಬ ಅಮೃತವ
ಕಾದಿರಿಸಿ ನೀಡಿದ ತಾಯೇ
ಬದುಕಿಗೆ ಜ್ಞಾನದ ಬೆಳಕ
ಮುದದಿ ನೀಡಿದ ಮಾಯೇ

ಕಾಯುವೇ ಎಲ್ಲ ಕಷ್ಟದಲಿ
ತಾಯಿ ದೇವರ ಲೀಲೇ
ಭಯವಾದರೆ ನಿನ್ನ ಮಡಿಲು
ದಯವಿರಿಸು ಈಗಲೇ

ಪ್ರೀತಿ

ಪ್ರೀತಿ

ಚುಮು ಚುಮು ಚಳಿಯಲಿ
ಸೂರ್ಯನ ಎಳೆಬಿಸಿಲ ಸ್ಪರ್ಶದಂತೆ
ಹಿತವೆನಿಸುವುದು ಈ ಪ್ರೀತಿ..

ಸುಡುಬಿಸಿಲಿನಲ್ಲಿ ನಡೆವಾಗ 
ಆಸರೆಯಾಗುವ ಹಸಿರು
ಗಿಡದ ನೆರಳಂತೆ ಪ್ರೀತಿ...

ಪ್ರತಿ ಹೆಜ್ಜೆಯ ಗೆಜ್ಜೆಯ 
ದನಿಯಲ್ಲಿ ಬೆರೆತುಹೋದ
ಇಂಪಾದ ಸ್ವರ ಪ್ರೀತಿ..

ನನ್ನ ಪ್ರತಿ ಕಣ್ಣೀರಿನ ಹನಿ, 
ನಸುನಗೆಯಲ್ಲೂ ಇಣುಕುವ
ಬೆಚ್ಚನೆಯ ಭಾವ ಈ ಪ್ರೀತಿ...

ಉಸಿರಾಡುವ ಗಾಳಿಯಲ್ಲಿ 
ಬೆರೆತು ಉಸಿರಾಗಿರುವ
ಜೀವದ ಜೀವ ಪ್ರೀತಿ...

ತನುವಿಗೆ ತಂಪು ನೀಡುವ
ಮನಕೆ ಚೈತನ್ಯ ಕೊಡುವ
ತುಂತುರು ಮಳೆಹನಿ ಪ್ರೀತಿ..

ಪ್ರೀತಿ ಒಂದು ಭಾವ ಹಲವು

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಸ್ಪರ್ಧೆಗಾಗಿ ಪ್ರೇಮಕಾವ್ಯ - ತೃತೀಯ

ಪ್ರೀತಿ ಒಂದು ಭಾವ ಹಲವು

ಕಣ್ಣು ತೆರೆದು ನೋಡು ಜಗವು ಪ್ರೀತಿಯ ಗೂಡು
ಸಹಕಾರ, ಸಹನೆ, ಶಾಂತಿಯಲಿ ಸಹಬಾಳ್ವೆ ಮಾಡು
ಮಾನವೀಯ ಮೌಲ್ಯಗಳಲಿ ಜೀವನವ ಮಾಡು
ಸತ್ಯ, ಒಳ್ಳೆಯ ತನದ ಹಿಂದೆ ಮಾನವ ನೀ ಓಡು

ಪ್ರೀತಿಯಲಿ ಇಹುದು ಹಲವಾರು ಬಗೆಯು
ದೈವವು ನೀಡಿಹ ಸುಂದರವಾದ ಕೊಡುಗೆಯು
ಯಾರಲೂ ಬೇಡವೇ ಬೇಡ ಹಗೆಯ ಹೊಗೆಯು
ಇರಲಿ ಜೀವನ ಪಯಣದಿ ಮುಗುಳುನಗೆಯು

ಹೃದಯ ಹೃದಯ ಬೆಸೆದಾಗ ಮೂಡುವ ಒಲವು
ತಾಯ ಅಪ್ಪುಗೆಯಲಿ ಮಗುವು ಮರೆವುದ ಜಗವು
ಮೂಕ ಪ್ರಾಣಿಗೂ ತಿಳಿವುದೀ ಪ್ರೇಮ ಭಾವವು
ಇಹುದು ಅಣ್ಣ-ತಂಗಿಯೆಂಬ ವಾತ್ಸಲ್ಯದ ಬಂಧವು

ಭುವಿ ಉದಯ ರವಿಯ ನಡುವಿನಾ ಒಲವು
ಜಗದ ಜೀವರಾಶಿಗಿದುವೇ ಆಗಿದೆ ಬಲವು
ಹೊಂದಾಣಿಕೆಯ ಜೀವನದಲೇ ಇದೆ ಚೆಲವು
ವಿಶ್ವ ಮಾನವ ಸಂದೇಶದೆ ಬಾಳಿಗೆ ಗೆಲುವು

ಮಾಮರಕೂ ಕೋಗಿಲೆಗೂ ಬೆಸೆದಿದೆ ಬಂಧ
ಬೆಟ್ಟದ ನೆಲ್ಲಿಗೂ ಸಾಗರದ ಉಪ್ಪಿಗೂ ಸಂಬಂಧ
ಎಲ್ಲೋ ಹುಟ್ಟಿ ಬೆಳೆದ ಹೃದಯಗಳಿಗೆ ಅನುಬಂಧ
ಬೆಸೆದಿರುವ ಭಾವಗಳಲಿ ತುಂಬಿಹುದು ಆನಂದ

ಜೀವನ ಸಂತೆ

 ಜೀವನದ ಸಂತೆ

ಕ್ಷಣ ಕ್ಷಣಕೂ ಅನಿರೀಕ್ಷಿತಗಳು
ಸುಲಭವಲ್ಲ ಜೀವನವೆಂಬ ಸಂತೆ
ಬಾಳ ದಾರಿಯ ತುಂಬಾ
ಇಹುದು ಬರಿ ತಿರುವುಗಳ ಕಂತೆ

ಆಲೋಚಿಸಿ ಜಾಗೃತೆಯಲಿ ಇರಿಸು
ನೀ ಹೆಜ್ಜೆಯನು ಮುಂದಕೆ
ಅಪಾಯದ ಸೂಚನೆಯ ಕಡೆಗಣಿಸಿ
ನಡೆಯದಿರು ನೀ ಮುಂದಕೆ

ಸರಳ ಬದುಕನು ನಡೆಸು ಎಂದಿಗೂ
ಅತಿಯಾಸೆಯನು ಬಿಟ್ಟು ಬಿಡು
ನೀನು ಬದುಕಿ ಇತರಿರಿಗೂ
ಸುಖವಾಗಿ ಬದುಕಲು ಬಿಡು

ನಾಲ್ಕು ದಿನದ ಜೀವನದಲಿ
ಏಕೆ ನಿನಗೆ ಬರಿಯ ಧಾವಂತ
ನೀನು ನೀನಾಗಿಯೇ ಬದುಕು
ಸ್ವಾರ್ಥಗಳನು ಬಿಟ್ಟು ಜೀವಂತ

ಹೊರಗೆ ಹಾಕು ಮನದಲಿ
ತುಂಬಿರುವ ಎಲ್ಲ ರೀತಿಯ ಕಲ್ಮಷ
ನಿನ್ನ ಭಾವನೆಗಳಾಗಲಿ
ಹಾಲಿನಂತೆಯೇ ನಿಷ್ಕಲ್ಮಷ


ಬಿಸಿಲು ಕುದುರೆ


ನೀರ ಮೇಲಣ ಗುಳ್ಳೆಯಂತೆ
ಜೀವನವು ಮನವೇ
ಸ್ವಾರ್ಥ, ವಂದನೆ, ಅಹಂಕಾರ
ದರ್ಪಗಳ ತೊರೆ ಮನವೇ

ಬಿಸಿಲು ಕುದುರೆಯನು
ಏರಬೇಡ ಮನವೇ
ಮರಭೂಮಿ ಮರೀಚಿಕೆ
ಹುಡುಕಬೇಡ ಮನವೇ

ನಾಲ್ಕು ದಿನದ ಜೀವನದಲಿ
ನಗುತ ಬಾಳು ಮನವೇ
ಎಲ್ಲರೊಳಗೆ ಒಂದಾಗಿ
ಬೆರೆತು ಹೋಗು ಮನವೇ

ಸೋದಾಗ ಕುಗ್ಗದಿರು
ಗೆದ್ದಾಗ ಹಿಗ್ಗದಿರು ಮನವೇ
ಕಷ್ಟಗಳಿಗೆ ಜಗ್ಗದೇ ಧೈರ್ಯದಿ
ಮುನ್ನುಗ್ಗು ನೀ ಮನವೇ

ಮಗುವಿನಂತೆ ಪ್ರತಿಕ್ಷಣವೂ
ಕಾರ್ಯತತ್ಪರನಾಗು ಮನವೇ
ನಗುವಿನಲೇ ಜಗವ ಗೆಲ್ಲುತ
ಮುನ್ನಡೆಯುತಿರು ಮನವೇ

ತವರು


ಹೆಣ್ಣಿನ ಪ್ರೀತಿಯ ತವರು
ಹಬ್ಬಿದೆ ಬಾಂಧವ್ಯದ ಬೇರು
ಮನದಿ ನೆನಪು ಹಚ್ಚ ಹಸಿರು
ಇಲ್ಲಿಯೇ ಬಂದಿಹುದು ಉಸಿರು

ಹೆಂಗೆಳೆಯರ ಒಲವಿನ ಗೂಡು
ಇಲ್ಲಿದೆ ಸವಿ ನೆನಪುಗಳ ಜಾಡು
ಕಷ್ಟ ಕಾಲದ ಸಂಜೀವಿನಿ ಇದು
ಹೆಣ್ಣಿಗೆ ತವರು ಗಂಧದ ಕೊರಡು

ಅಣ್ಣ ತಮ್ಮರೊಡನೆ ಆಡಿದ ನೆನಪು
ಅಪ್ಪ-ಅಮ್ಮನ ವಾತ್ಸಲ್ಯದ ತಂಪು
ಅಂಗಳದ ಜಾಜಿ ಮಲ್ಲಿಗೆಯ ಕಂಪು
ತವರಿನಾ ಕೋಗಿಲೆ ಗಾನ ಬಲು ಇಂಪು

ಕಳೆದ ಬಾಲ್ಯದ ಸವಿಯ ನೆನಪುಗಳು
ಗೆಳತಿಯೊಡನೆ ಕಂಡ ಕನಸುಗಳು
ಮೊದಲ ಮೂಡಿದ ಪ್ರೀತಿ ಭಾವಗಳು
ಮುಚ್ಚಿಟ್ಟ ಹತ್ತು ಹಲವು ಗುಟ್ಟುಗಳು

ಮತ್ತೆ ಹೋಗುವ ಕಾತರವು ತವರಿಗೆ
ಸೇರವ ಕಾತರವು ಕಂಪಿನಾ ಮಣ್ಣಿಗೆ
ಮೈಯೊಡ್ಡಬೇಕು ಸೋನೆ ಮಳೆಗೆ
ಮರಳ ಬೇಕು ಒಮ್ಮೆ ಸ್ವರ್ಗದ ಸಿರಿಗೆ


ಬಾಳ ಮುನ್ನುಡಿ

ಬಾಳ ಮುನ್ನುಡಿ

ತಂದೆ ಪ್ರೀತಿಯ ವರ್ಷಧಾರೆಯ
ನಿನ್ನನು ನೋಡಿ ನಾನು ತನ್ಮಯ
ನೀ ನನ್ನಯ ಮುದ್ದಿನ ತನಯ
ನೀನೊಂದು ಮುಗಿಯದ ವಿಸ್ಮಯ

ನೀನೇ ನನ್ನಯ ಸುಂದರ ಲೋಕ
ನಿನ್ನಯ ನಾಮಧೇಯವು ಶಿವಾಂಕ
ಅಮ್ಮಾ.. ಎಂಬ ನಿನ್ನ ಧ್ವನಿ ಪುಳಕ
ನೀ ನನ್ನ ಗೆಳೆಯ, ಮಾರ್ಗದರ್ಶಕ

ನೀ ತುಂಬಿದೆ ನನ್ನಯ ಮಡಿಲು
ನಮ್ಮ ನಡುವೆ ಇದೆ ಪ್ರೀತಿ ಕಡಲು
ಎಲ್ಲ ಕಷ್ಟವ ಮರೆವೆ ನೀ ನಗಲು
ಜಗದಿ ನೀ ಎಲ್ಲಕ್ಕಿಂತ ಮಿಗಿಲು

ನೀ ನನ್ನ ಬಾಳಿನ ಮುನ್ನುಡಿ
ಮಧುರವು ನಿನ್ನ ಪ್ರತಿ ನುಡಿ
ಎಲ್ಲ ನೋವಿಗಾದೆ ನೀ ಬೆನ್ನುಡಿ
ಸಾಂತ್ವನ ನೀಡುವುದು ನಿನ್ನ ನುಡಿ



ವಿಧಿ ಬರಹ

ವಿಧಿ ಬರಹ

ದೈವವಿತ್ತ ಬದುಕು ಇದುವು
ತಿಳಿಯದು ವಿಧಿಯ ಆಟವು
ಹಂಚಿ ತಿನ್ನುವುದರಲೇ ಸುಖವು
ಇಲ್ಲ ಇವರಿಗೆ ಬೇರೆ ವೈಭವವು

ತುತ್ತಿಗಾಗಿ ಮಾಡುವ ಅಲೆದಾಟ
ನೆಲೆಗಾಗಿ ನಿತ್ಯವೂ ಹುಡುಕಾಟ
ಜೊತೆಗೆ ಉಳ್ಳವರು ಕೊಡುವ ಕಾಟ
ದೇವರೇ.. ಏನಿದು ನಿನ್ನಯ ಆಟ?

ಚಿಂದಿ ಆಯುವುದೇ ಬಾಲ್ಯವು
ಅದರಲಿ ದೊರೆತುದೇ ಅಮೂಲ್ಯವು
ಎಣ್ಣೆ ನೀರು ಕಾಣದ ಜೀವವು
ಸಿಕ್ಕಿದುದರಲೇ ಸಂತೃಪ್ತಿಯ ನಗುವು

ಜೊತೆಯಾಗಿಹರು ಇವರಿಬ್ಬರು
ನೋವು-ನಲಿವಲಿ ಒಬ್ಬರಿಗೊಬ್ಬರು
ಎಲ್ಲಿಹರೋ ಇವರನು ಹೆತ್ತವರು??
ಮುಗ್ಧತೆಯ ಲೋಕದಲಿ ಬರಿ ಇವರು...



ಸೈನಿಕ

ಸೈನಿಕ

ಮಳೆ ಬಿಸಿಲ ಲೆಕ್ಕಿಸದೆ ಗಡಿಯನು
ಕಾಯುವ ವೀರನು ಸೈನಿಕನು
ನಮಗೆ ನೆಮ್ಮದಿ ನೀಡುವನು
ದೇಶದ ಹೆಮ್ಮೆಯ ಪುತ್ರನಿವನು

ಜಯಶಾಲಿ ಆದ ಯುದ್ಧದಲಿ
ಆದರೆ ಕೈ ಇಲ್ಲವಾಯ್ತು ದಾಳಿಯಲಿ
ಹೊರಟ ಊರಿಗೆ ವಿರಾಮದಲಿ
ಪ್ರೀತಿಯ ಮಗಳ ನೆನೆಯುತಲಿ

ನಿಂತನು ತುಂಡಾದ ಕೈ ಹಿಂದಿರಿಸಿ
ಮಗಳು ಚಾಕಲೇಟ್ ಬಯಸಿ
ಅಪ್ಪನ ಅಪ್ಪಿ ಕೈಯ ಎಳೆದಾಗ
ಅವಳ ಕಣ್ಣಲಿ ನೀರು ಹರಿಯಿತಾಗ

ರೋಚಕ ಕಥೆಯ ಅವಳಿಗೆ
ಧೈರ್ಯವ ನೀಡುತ ಮಗಳಿಗೆ
ಹೆಮ್ಮೆಯ ಸೈನಿಕ ನಗಿಸಿದನು
ತಂದಿಹ ಉಡುಗೊರೆ ನೀಡಿದನು

ಚೈತ್ರದ ಚಿಗುರು

ಚೈತ್ರದ ಸೊಬಗು

ಋತುಗಳಗ ರಾಜ ವಸಂತನ ಆಗಮನ
ಚೈತ್ರದ ಚಿಗುರು ಸೆಳೆಯುತಿದೆ ನಯನ
ಬೇವು-ಬೆಲ್ಲದ ಸಿಹಿ-ಕಹಿಯ ಮಿಶ್ರಣ
ಜೀವನದಿ ಸುಖ-ದುಃಖದ ಸಮ್ಮಿಶ್ರಣ

ಹಸಿರು ಸೀರೆಯಲಿ ಭುವಿಯ ನರ್ತನ
ಇದ ನೋಡಲು ರವಿಯ ಆಗಮನ
ನಾಚಿ ನೀರಾದ ಭುವಿಯ ಮೈ-ಮನ
ಮೇಳೈಸಿದೆ ಇದೆ ಚೆಲುವಿನ ಕಥನ

ಜೊತೆಗೆ ಕೋಗಿಲೆಯ ಮಧುರ ಗಾನ
ತರುಲತೆ, ಪುಷ್ಪಗಳ ಸೊಬಗ ಯಾನ
ಪ್ರಕೃತಿ ಸೊಬಗಿನ ರಮ್ಯತೆಯ ತಾಣ
ಎನಿದು ಸುಂದರವು ಇಲ್ಲಿ ಜೀವನ...

ಭಾವ ಸಂಚಲನ

ಭಾವ ಸಂಚಲನ

ಇಳಿ ಸಂಜೆಯ ಸೋನೆ ಮಳೆಯಲಿ
ಮಳೆಯಲಿ ಭಾವಸಮ್ಮಿಲನ ಹೃದಯದಲಿ
ಹೃದಯದಲಿ ಪ್ರೀತಿಯ ಸರಿಗಮ ಗುನುಗುತಲಿ
ಗುನುಗುತಲಿ ಬೆಸೆಯುತಿದೆ ಭಾವ ಮೌನದಲಿ

ಮೌನದಲೂ ಜೀವನಕೆ ಹೊಸ ಅರ್ಥ ನಿನ್ನಾಗಮನ
ನಿನ್ನಾಗಮನದಿ ಬಾಳಲಿ ನಿನ್ನೊಲವ ಬಂಧನ
ಬಂಧನದ ಜೊತೆ ಸ್ಪರ್ಶದಿ ಹೊಸ ರೋಮಾಂಚನ 
ರೋಮಾಂಚನ ಬಾಳ ಯಾನದಿ ನೂತನ ಸಂಚಲನ

ಸಂಚಲನದ ಏಕಾಂತ ನಾಚಿ ಮರೆಯಾದ ಚಂದಿರ
ಚಂದಿರನ ಬೆಳಕಲಿ ಭಾವಗಳ ಹಸಿರು ಹಂದರ
ಹಂದರದಲೆ ಉಕ್ಕುತಿದೆ ಭಾವದಲೆಯ ಸರೋವರ
ಸರೋವರ ಪದಗಳಗೆ ನಿಲುಕದಷ್ಟು ಸುಂದರ

ಸುಂದರವಾಗಿ ಮೌನವಾದ ಕೋಗಿಲೆ ಮತ್ತೆ ಹಾಡಿತು
ಹಾಡುತಲಿ ಪ್ರೀತಿಯ ಗೂಡನು ಮುದದಿ ಸೇರಿತು
ಸೇರುತಲಿ ಬಾಳಲಿ ಕವಿದ ಕತ್ತಲು ಕಳೆಯಿತು
ಕಳೆಯಿತು ಒಲುಮೆಯಲಿ ಜೀವನ ಹಸನಾಯಿತು