ಭಾವ ಸಂಚಲನ
ಇಳಿ ಸಂಜೆಯ ಸೋನೆ ಮಳೆಯಲಿ
ಮಳೆಯಲಿ ಭಾವಸಮ್ಮಿಲನ ಹೃದಯದಲಿ
ಹೃದಯದಲಿ ಪ್ರೀತಿಯ ಸರಿಗಮ ಗುನುಗುತಲಿ
ಗುನುಗುತಲಿ ಬೆಸೆಯುತಿದೆ ಭಾವ ಮೌನದಲಿ
ಮೌನದಲೂ ಜೀವನಕೆ ಹೊಸ ಅರ್ಥ ನಿನ್ನಾಗಮನ
ನಿನ್ನಾಗಮನದಿ ಬಾಳಲಿ ನಿನ್ನೊಲವ ಬಂಧನ
ಬಂಧನದ ಜೊತೆ ಸ್ಪರ್ಶದಿ ಹೊಸ ರೋಮಾಂಚನ
ರೋಮಾಂಚನ ಬಾಳ ಯಾನದಿ ನೂತನ ಸಂಚಲನ
ಸಂಚಲನದ ಏಕಾಂತ ನಾಚಿ ಮರೆಯಾದ ಚಂದಿರ
ಚಂದಿರನ ಬೆಳಕಲಿ ಭಾವಗಳ ಹಸಿರು ಹಂದರ
ಹಂದರದಲೆ ಉಕ್ಕುತಿದೆ ಭಾವದಲೆಯ ಸರೋವರ
ಸರೋವರ ಪದಗಳಗೆ ನಿಲುಕದಷ್ಟು ಸುಂದರ
ಸುಂದರವಾಗಿ ಮೌನವಾದ ಕೋಗಿಲೆ ಮತ್ತೆ ಹಾಡಿತು
ಹಾಡುತಲಿ ಪ್ರೀತಿಯ ಗೂಡನು ಮುದದಿ ಸೇರಿತು
ಸೇರುತಲಿ ಬಾಳಲಿ ಕವಿದ ಕತ್ತಲು ಕಳೆಯಿತು
ಕಳೆಯಿತು ಒಲುಮೆಯಲಿ ಜೀವನ ಹಸನಾಯಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ