ಶನಿವಾರ, ಮಾರ್ಚ್ 6, 2021

ಸವಿಜೇನು

ಸವಿಜೇನು

ಮರೆಯದಿರು ಮನವೇ ಸವಿನೆನಪುಗಳನು
ತೊರೆಯದಿರು ಮನವೇ ಬಾಂಧವ್ಯಗಳನು
ಸಹಬಾಳ್ವೆಯಲಿ ನೋಡು ಬಾಳ ಚೆಲುವನು
ಕೂಡಿ ಬಾಳಿದರೆ ಜೀವನವು ಸವಿಜೇನು

ಜೀವನವು ನಿರತ ಭಾವದಲೆಗಳ ಹೊನಲು
ಬಡಿಯಲು ಬಹುದು ಭೀಕರ ಬರಸಿಡಿಲು
ಹರಿಯಲೂ ಬಹುದು ಸಂತಸದ ಕಡಲು
ಬಾಳ ದಾರಿಯ ತುಂಬಾ ಹಲವು ಕವಲು

ಕಹಿಯ ಹಾಲಾಹಲವನು ಬೇಗನೆ ಮರೆತು
ಮೂಡಿಸಲು ಪಣತೊಡುವ ನಮ್ಮ ಗುರುತು
ಕಷ್ಟ-ಸುಖದ ಜೀವನದಿ ಸಮವಾಗಿ ಬೆರೆತು
ಮನದ ತುಡಿತ-ಮಿಡಿತಗಳ ಆದಷ್ಟು ಅರಿತು

ಬುದ್ಧಿಯ ಮಾತು ಕೇಳಿದರೆ ಆಗಬಹುದು ತಪ್ಪು
ಮನದ ಮಾತನು ಕೇಳುತಲಿ ಅದರನೇ ಒಪ್ಪು
ಅಮೂಲ್ಯ ಮುತ್ತ ಕೊಡುವುದು ಸಾಗರದ ಚಿಪ್ಪು
ಒಳ್ಳೆಯ ಮೌಲ್ಯಗಳಿಗೆ ಇಲ್ಲ ಎಂದಿಗೂ ಮುಪ್ಪು

ಮೆಲುಕು ಹಾಕುವ ನಾವು ನೆನಪುಗಳ ಯಾನ
ಇದರಲೇ ಅಡಗಿಹುದು ನಮ್ಮಯ ಜೀವನ
ಹೃದಯವಿದು ಸಿಹಿ-ಕಹಿ ನೆನಪುಗಳ ಸದನ
ಮೀಟುತಿಹುದು ಅದುವು ಇಂಪಾದ ಗಾನ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ