ಹೆಣ್ಣಿನ ಪ್ರೀತಿಯ ತವರು
ಹಬ್ಬಿದೆ ಬಾಂಧವ್ಯದ ಬೇರು
ಮನದಿ ನೆನಪು ಹಚ್ಚ ಹಸಿರು
ಇಲ್ಲಿಯೇ ಬಂದಿಹುದು ಉಸಿರು
ಹೆಂಗೆಳೆಯರ ಒಲವಿನ ಗೂಡು
ಇಲ್ಲಿದೆ ಸವಿ ನೆನಪುಗಳ ಜಾಡು
ಕಷ್ಟ ಕಾಲದ ಸಂಜೀವಿನಿ ಇದು
ಹೆಣ್ಣಿಗೆ ತವರು ಗಂಧದ ಕೊರಡು
ಅಣ್ಣ ತಮ್ಮರೊಡನೆ ಆಡಿದ ನೆನಪು
ಅಪ್ಪ-ಅಮ್ಮನ ವಾತ್ಸಲ್ಯದ ತಂಪು
ಅಂಗಳದ ಜಾಜಿ ಮಲ್ಲಿಗೆಯ ಕಂಪು
ತವರಿನಾ ಕೋಗಿಲೆ ಗಾನ ಬಲು ಇಂಪು
ಕಳೆದ ಬಾಲ್ಯದ ಸವಿಯ ನೆನಪುಗಳು
ಗೆಳತಿಯೊಡನೆ ಕಂಡ ಕನಸುಗಳು
ಮೊದಲ ಮೂಡಿದ ಪ್ರೀತಿ ಭಾವಗಳು
ಮುಚ್ಚಿಟ್ಟ ಹತ್ತು ಹಲವು ಗುಟ್ಟುಗಳು
ಮತ್ತೆ ಹೋಗುವ ಕಾತರವು ತವರಿಗೆ
ಸೇರವ ಕಾತರವು ಕಂಪಿನಾ ಮಣ್ಣಿಗೆ
ಮೈಯೊಡ್ಡಬೇಕು ಸೋನೆ ಮಳೆಗೆ
ಮರಳ ಬೇಕು ಒಮ್ಮೆ ಸ್ವರ್ಗದ ಸಿರಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ