ಕರೆ ನೀಡಿದೆ ಮಮತೆಯ ಕರೆಯೋಲೆ
ಸ್ವಾಗತಿಸುತಿದೆ ಮಾವಿನೆಲೆಯ ಮಾಲೆ
ಸಂಭ್ರಮಕೆ ಮೆರುಗು ನೀಡಿದೆ ಬಾಳೆ ಎಲೆ
ಕಣ್ಮನ ಸೆಳೆಯುತಿದೆ ಹೂ ಸಿಂಗಾರದ ಕಲೆ
ಎಲ್ಲೆಲ್ಲೂ ಹರಡಿದೆ ಚೆಲುವಿನಾ ಬಲೆ...
ಅತಿಥಿಗಳಿಗೆ ಕಾದಿದೆ ತಂಪು ಪಾನಕವು
ಘಮಘಮಿಸುತಿದೆ ಲಘು ಉಪಹಾರವು
ನಗು ಮೊಗದ ಮಾತಿನಾ ಸ್ವಾಗತವು
ಕಾಯುತಿದೆ ಮೆತ್ತನೆ ಸುಖಾಸನವು
ಸುತ್ತಲಿನ ಅಲಂಕಾರ ಚಿತ್ತಾಕರ್ಷಕವು...
ಮೊಳಗುತಿದೆ ಇಂಪಾದ ಮಂಗಳ ವಾದ್ಯವು
ರೇಷ್ಮೆ ಸೀರೆಯ ಮಾನಿನಿಯರ ಸೊಗವು
ಜೊತೆಗೆ ಬಂಗಾರದ ಆ ಆಭರಣದ ಲಾಸ್ಯವು
ಎಲ್ಲೆಡೆ ಕಾಣುತಿದೆ ಸವಿ ಸಂಭ್ರಮವು
ಸಭೆಯಲಿ ಗುಜು ಗುಜು ಮಾತಿನ ಸಡಗರವು...
ಹೊರ ಹೊಮ್ಮುತಿದೆ ಅಕ್ಷತೆಯ ರಂಗು
ಮೊಳಗುತಿದೆ ಮಧುರಗಾನದ ಗುಂಗು
ಮನ ಸೆಳೆಯುತಿದೆ ಬೆಳಕಿನಾ ಬೆಡಗು
ವರ್ಣನಾತೀತ ಶುಭಕಾರ್ಯದ ಸೊಬಗು
ಮಂತ್ರ ಶಾಸ್ತ್ರವು ಹೆಚ್ಚಿಸಿದೆ ಮೆರಗು...
ಬಾಕಿ ಉಳಿದಿದೆ ಇನ್ನೂ ಔತಣ ಕೂಟ
ಸಿದ್ಧವಾಗಿದೆ ಇದಕೆ ಹಸಿರು ತೋಟ
ಕೈ ಬೀಸಿ ಕರೆದಿದೆ ಬಾಳೆಲೆಯ ಊಟ
ಸಮಾರಂಭವಿನ್ನು ಇತಿಹಾಸದ ಪುಟ
ಸವಿ ನೆನಪಿಗಾಗಿ ಇರಲಿ ಒಂದು ಪಟ...
ಉಡುಗೊರೆಯ ಶಾಸ್ತ್ರ ಕೊನೆಯಲಿ
ಉಳಿಯಲಿ ಎಂದೆಂದೂ ನೆನಪಿನಲಿ
ಹರಸಿ ಹಾರೈಸಿ ಶುಭ ಕೋರಿಕೆಯಲಿ
ಹಂಚಿದ ಸಿಹಿ ಎಲ್ಲರ ಕರದಲಿ
ಕೊನೆಯಾಗುವುದು ನಿರ್ಗಮನದಲಿ..